ದುಬೈ [ಯುಎಇ]:ರೋಹಿತ್ ಶರ್ಮಾ ಅವರನ್ನು ಭಾರತದ ಟಿ 20 ನಾಯಕರನ್ನಾಗಿ ಮಾಡಲು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಸಲಹೆ ನೀಡಿದ್ದಾರೆ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಐದನೇ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.
ರೋಹಿತ್ ಅವರನ್ನು ಟಿ- 20 ನಾಯಕನನ್ನಾಗಿ ಮಾಡುವ ಮೂಲಕ ಕೊಹ್ಲಿಯ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಏಕದಿನ ಮತ್ತು ಟೆಸ್ಟ್ ಸ್ವರೂಪಗಳಲ್ಲಿ ತಂಡವನ್ನು ವಿರಾಟ್ ನಿಶ್ಚಿಂತೆಯಿಂದ ಮುನ್ನಡೆಸಬಹುದು ಎಂದು ವಾನ್ ಹೇಳಿದ್ದಾರೆ.
" ರೋಹಿತ್ ಶರ್ಮಾ ಟೀಮ್ ಇಂಡಿಯಾದ ಟಿ-20 ನಾಯಕನನ್ನಾಗಿ ಮಾಡಬೇಕು. ಅವರು ಒಬ್ಬ ಅದ್ಭುತ ಲೀಡರ್ ಹಾಗೂ ಆಟಗಾರ. ಪಂದ್ಯಗಳನ್ನು ಹೇಗೆ ಗೆಲ್ಲುವುದು ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಇದರಿಂದ ವಿರಾಟ್ಗೆ ಸ್ವಲ್ಪ ಮಟ್ಟಿಗೆ ಹೊರೆ ಕಡಿಮೆ ಮಾಡಬಹುದು. ವಿರಾಟ್ ಕೇವಲ ಆಟಗಾರನಾಗಿ ಅದ್ಭತ ಪ್ರದರ್ಶನ ನೀಡಲು ಸಹಾಯಕ ಆಗುತ್ತದೆ ಎಂದು ವಾನ್ ಟ್ವೀಟ್ ಮಾಡಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯಾವಳಿಯ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸಿತು. ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಇದು ಐದನೇ ಐಪಿಎಲ್ ಪ್ರಶಸ್ತಿ. ಮುಂಬೈ ಇಂಡಿಯನ್ಸ್ ಫ್ರ್ಯಾಂಚೈಸ್ ಈ ಹಿಂದೆ 2013, 2015, 2017 ಮತ್ತು 2019 ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿತ್ತು .
ರೋಹಿತ್ ಶರ್ಮಾ ಒಟ್ಟು ಆರು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ನಾಯಕರಾಗಿ ಐದು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು 2009 ರಲ್ಲಿ ಆಡಮ್ ಗಿಲ್ಕ್ರಿಸ್ಟ್ ಅವರ ನಾಯಕತ್ವದಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಪ್ರಶಸ್ತಿಯನ್ನು ಗೆದ್ದಿದ್ದಾರೆ.