ದುಬೈ:ಸತತ ಮೂರನೇ ಸೋಲನ್ನು ಅನುಭವಿಸಿದ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್, ಹಲವು ಪಂದ್ಯಗಳಿಂದ ಸೋತ ತಂಡದ ಭಾಗವಾಗಿರುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ.
ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್‌ಗಳ ಭಾರೀ ಸೋಲನ್ನು ಎದುರಿಸಿತು. ಅಲ್ಲದೆ, ಈ ಸೀಸನ್ನಲ್ಲಿ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಪಂಜಾಬ್ಗೆ ಎದುರಾದ ನಾಲ್ಕನೇ ಸೋಲಾಗಿದೆ.
ಹಲವು ಪಂದ್ಯಗಳಿಂದ ಸೋತ ತಂಡದ ಭಾಗವಾಗಿರುವುದು ತುಂಬಾ ಕಷ್ಟ. ನಾವು ಕಷ್ಟಪಟ್ಟು ಪ್ರಯತ್ನಿಸುತ್ತಿದ್ದೇವೆ. ಇಲ್ಲಿ ಯಾವುದೇ ರಾಕೆಟ್ ಸೈನ್ಸ್ ಇಲ್ಲ, ನಾವು ಎಲ್ಲಿ ತಪ್ಪು ಮಾಡುತ್ತಿದ್ದೇವೆ ಎಂದು ನಮಗೆ ತಿಳಿದಿದೆ. 178 ರನ್ ಉತ್ತಮ ಸ್ಕೋರ್ ಎಂದು ನಾನು ಭಾವಿಸಿದ್ದೆ ಎಂದಿದ್ದಾರೆ.
ನಾವು ಬ್ಯಾಟಿಂಗ್ ಪ್ರಾರಂಭಿಸಿದಾಗ ವಿಕೆಟ್ ಸ್ವಲ್ಪ ಸ್ಲೋ ಇತ್ತು. ಈ ವಿಕೆಟ್‌ಗೆ 170ರಿಂದ 180 ಉತ್ತಮ ಸ್ಕೋರ್ ಎಂದು ಅನಿಸಿತು. ಆದರೆ ಈ ವರ್ಗದ ಆಟಗಾರರ ವಿರುದ್ಧ ನಾವು ವಿಕೆಟ್ ಪಡೆಯದಿದ್ದರೆ, ಕಷ್ಟವಾಗುತ್ತದೆ ಎಂದು ತಿಳಿದಿತ್ತು. ಒಂದು ಓವರ್ಗೆ 7ರಿಂದ 8 ರನ್ ಗಳಿಸಿದರೆ ನಾವು ಆಕ್ರಮಣಕಾರಿ ದಾಳಿ ನಡೆಸಿ ವಿಕೆಟ್ ಪಡೆಯಬಹುದು. ಆದರೆ ಓವರ್ಗೆ 10 ರನ್ ಗಳಿಸಿದರೆ ನಾವು ಆಕ್ರಮಣಕಾರಿಯಾಗುವುದು ಸ್ವಲ್ಪ ಕಷ್ಟ. ಅವರೆಲ್ಲರೂ ವೃತ್ತಿಪರ ಆಟಗಾರರು, ಎಲ್ಲಿ ತಪ್ಪಾಗಿದೆ ಎಂದು ಅವರಿಗೆ ತಿಳಿದಿದೆ ಅಂತ ರಾಹುಲ್ ತಿಳಿಸಿದ್ದಾರೆ.
ಸಿಎಸ್ಕೆ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದ ಕೆ.ಎಲ್.ರಾಹುಲ್, 52 ಎಸೆತಗಳಲ್ಲಿ 63 ರನ್ ಗಳಿಸಿ ಉತ್ತಮ ಪ್ರದರ್ಶನ ತೋರಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಪಂಜಾಬ್ ತಂಡ 4 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಮರುತ್ತರವಾಗಿ ಬ್ಯಾಟಿಂಗ್ ನಡೆಸಿದ ಚೆನ್ನೈ 20 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 181 ರನ್ ಗಳಿಸುವ ಮೂಲಕ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.