ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯು ಮುಕ್ತಾಯಗೊಳ್ಳುತ್ತಿದ್ದಂತೆ, ಕ್ರಿಕೆಟ್ ಆಡಲು ಸಾಧ್ಯವಾಗಿದ್ದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಶಿಖರ್ ಧವನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಐದನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.
ಆರಂಭದಲ್ಲಿ, ಐಪಿಎಲ್ ಟೂರ್ನಿಯನ್ನು ಮಾರ್ಚ್‌ನಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಯಿತು. ಹಲವಾರು ಮಾರ್ಗಸೂಚಿಗಳೊಂದಿಗೆ, ಸೆಪ್ಟೆಂಬರ್ 19 ರಂದು ಯುಎಇಯಲ್ಲಿ ಟೂರ್ನಿ ಪ್ರಾರಂಭವಾಯಿತು.
"ನನ್ನ ಜೊತೆಯಲ್ಲಿದ್ದ ಅತ್ಯುತ್ತಮ ವ್ಯಕ್ತಿಗಳಿಂದಾಗಿ ಯುಎಇ ಅನುಭವ ಉತ್ತಮವಾಗಿತ್ತು. ಯುಎಇಗೆ ಹೋಗಿ ಕ್ರಿಕೆಟ್ ಆಡುವ ಅವಕಾಶಕ್ಕಾಗಿ ಕೃತಜ್ಞನಾಗಿರುತ್ತೇನೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರು, ತರಬೇತುದಾರರು, ಮ್ಯಾನೇಜ್ಮೆಂಟ್ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು" ಎಂದು ಶಿಖರ್ ಧವನ್ ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಪಂದ್ಯಾವಳಿಯನ್ನು ನಡೆಸಿದ್ದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ರವಿಚಂದ್ರನ್ ಅಶ್ವಿನ್, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರಯತ್ನವನ್ನು ಶ್ಲಾಘಿಸಿದ್ದರು.
ಫೈನಲ್ ಪಂದ್ಯದ ಸೋಲಿನ ಬಳಿಕ ಟ್ವೀಟ್ ಮಾಡಿದ್ದ ಅಶ್ವಿನ್, "ಇದು ನಮ್ಮ ದಿನವಲ್ಲ, ಮುಂಬೈ ಈ ಗೆಲುವಿಗೆ ಅರ್ಹವಾಗಿದೆ. ಕಠಿಣ ಸಮಯದಲ್ಲಿ ಈ ರೀತಿಯ ಪಂದ್ಯಾವಳಿಯನ್ನು ನಡಸಿದ ಬಿಸಿಸಿಐ ಪ್ರಯತ್ನ ಅದ್ಭುತವಾಗಿದೆ" ಎಂದು ಅಶ್ವಿನ್ ಹೇಳಿದ್ದಾರೆ.