ಶಾರ್ಜಾ: ಎಲ್ಲಾ ವಿಭಾಗಗಳಲ್ಲೂ ಅದ್ಭುತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 46 ರನ್ಗಳಿಂದ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
185 ರನ್ಗಳ ಗೆಲುವಿನ ಗುರಿ ಪಡೆದ ಸ್ಟಿವ್ ಸ್ಮಿತ್ ಪಡೆ, ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಆರಂಭಿಕ ಆಟಗಾರ ಜೋಸ್ ಬಟ್ಲರ್ ಕೇವಲ 13 ರನ್ ಗಳಿಸಿ ಶಿಖರ್ ಧವನ್ ಪಡೆದ ಅದ್ಭುತ ಕ್ಯಾಚ್ಗೆ ಬಲಿಯಾದರು. ಇನ್ನೊಂದೆಡೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ 34 (36 ಎಸೆತ) ರನ್ಗೆ ಔಟ್ ಆದರು.
ಬಳಿಕ ನಾಯಕ ಸ್ಮಿತ್ ಕೊಂಚ ಪ್ರತಿರೋಧ ತೋರಿದರೂ 24 ರನ್ ಆಗಿದ್ದಾಗ ಹೆಟ್ಮಾಯರ್ಗೆ ಕ್ಯಾಚ್ ನೀಡಿ ಹೊರನಡೆದರು. ನಂತರ ರಾಹುಲ್ ತೆವಾಟಿಯಾ (38) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತವನ್ನೂ ತಲುಪಲಿಲ್ಲ. ಅಂತಿಮವಾಗಿ ರಾಯಲ್ಸ್ 19.4 ಓವರ್ಗಳಲ್ಲಿ 138 ರನ್ಗೆ ಸರ್ವಪತನ ಕಾಣುವ ಮೂಲಕ 46 ರನ್ಗಳಿಂದ ಸೋಲುಂಡಿತು.
ಕ್ಯಾಪಿಟಲ್ಸ್ ಪರ ರಬಾಡಾ 3, ಅಶ್ವಿನ್ ಹಾಗೂ ಸ್ಟೋನಿಸ್ ತಲಾ 2, ನಾರ್ಟ್ಜಿ, ಹರ್ಷಲ್ ಪಟೇಲ್ ಹಾಗೂ ಅಕ್ಷರ್ ಪಟೇಲ್ ಒಂದೊಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.