ದುಬೈ: ಇಲ್ಲಿನ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 2) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 14ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 7 ರನ್ಗಳ ಗೆಲುವು ಸಾಧಿಸಿತು. ಕೇವಲ 26 ಎಸೆತಗಳಲ್ಲಿ ಅಜೇಯ ಅರ್ಧಶತಕ ಗಳಿಸಿದ ಪ್ರಿಯಂ ಗರ್ಗ್ ತಂಡದ ಗೆಲವಿಗೆ ಕಾರಣರಾದರು.
ಇಲ್ಲಿನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದ್ರೆ ಆರಂಭಿಕ ಆಟಗಾರ ಬೈರ್ಸ್ಟೋವ್ ಸೊನ್ನೆಗೆ ಔಟಾಗುವ ಮೂಲಕ ತಂಡಕ್ಕೆ ಆರಂಭಿಕ ಆಘಾತ ನೀಡಿದರು.
ಇನ್ನು ಆರಂಭಿಕರಾಗಿ ಕಣಕ್ಕಿಳಿದಿದ್ದ ವಾರ್ನರ್, ಮನೀಷ್ ಪಾಂಡೆ ಜೊತೆ ಸೇರಿ ನಿಧಾನವಾಗಿ ರನ್ ಪೇರಿಸಲು ಆರಂಭಿಸಿದರು. ಈ ಜೋಡಿ ಉತ್ತಮವಾಗಿ ಆಡುತಿದ್ದಾಗ ಚೆನ್ನೈ ಬೌಲರ್ ಎಸ್ಎಸ್ ಠಾಕೂರ್, ಮನೀಷ್ ಪಾಂಡೆ (29) ವಿಕೆಟ್ ಕಿತ್ತು, ಬೃಹತ್ ಮೊತ್ತಕ್ಕೆ ತಡೆಹಾಕಿದರು.
ಇನ್ನು ತಂಡದ ಮೊತ್ತ 69 ಆಗಿದ್ದಾಗ ಉತ್ತಮವಾಗಿ ಆಡುತ್ತಿದ್ದ ವಾರ್ನರ್ (28) ಚಾವ್ಲಾಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಬಂದಷ್ಟೇ ವೇಗವಾಗಿ ವಿಲಿಯಮ್ಸ್ನ್ (9) ಕೂಡ ಔಟಾದರು. ಈ ವೇಳೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಪ್ರಿಯಂ ಗರ್ಗ್ 26 ಎಸೆತಗಳಲ್ಲಿ ಅಜೇಯ ಅರ್ಧಶತಕ (51) ಗಳಿಸಿ ಆಸರೆಯಾದರು. ಜೊತೆಗೆ ಅಭಿಶೇಕ ಶರ್ಮಾ (31) ರನ್ ಗಳಿಸಿದ ಪರಿಣಾಮ ಚೆನ್ನೈಗೆ ಸನ್ರೈಸರ್ಸ್ 165 ರನ್ಗಳ ಗುರಿ ನೀಡಿತು.
ಚೆನ್ನೈ ಪರ ಚಹಾರ್ 2 ಕಬಳಿಸಿದ್ರೆ, ಎಸ್ಎನ್ ಠಾಕೂರ್ ಮತ್ತು ಚಾವ್ಲಾ ತಲಾ 1 ವಿಕೆಟ್ ಕಿತ್ತರು.
ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ಕಿಂಗ್ಸ್ 4 ರನ್ ಗಳಿಸುವಷ್ಟರಲ್ಲಿ ಭುವನೇಶ್ವರ್ ಬೌಲಿಂಗ್ನಲ್ಲಿ ಶೇನ್ ವಾಟ್ಸನ್ (1) ವಿಕೆಟ್ ಕಳೆದುಕೊಂಡಿತು. ಬಳಿಕ ಆರಂಭಿಕರಾಗಿ ಬಂದಿದ್ದ ಫಾಫ್ ಡು ಪ್ಲೆಸಿಸ್ ಜೊತೆಯಾದ ಆಂಬಟಿ ರಾಯುಡು (8) ಕೂಡ ಹೆಚ್ಚು ಹೊತ್ತು ನಿಲ್ಲದೆ ನಟರಾಜನ್ಗೆ ವಿಕೆಟ್ ಒಪ್ಪಿಸಿದರು. ನಂತರ ತಂಡದ ಮೊತ್ತ 36 ರನ್ ಆಗಿದ್ದಾಗ ಡು ಪ್ಲೆಸಿಸ್ (22) ರನ್ ಔಟ್ ಬಲೆಗೆ ಬಿದ್ದರು. ಇನ್ನು ಕೇದಾರ್ ಜಾಧವ್ (3) ಬಂದವಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.