ಚೆನ್ನೈ : ಚೆಪಾಕ್ನಲ್ಲಿ ನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ರೋಚಕ ಹಣಾಹಣಿಯಲ್ಲಿ ಧೋನಿ ನೇತೃತ್ವದ ಸಿಎಸ್ಕೆ ಕೊನೆಯ ಓವರ್ನಲ್ಲಿ ಅದ್ಭುತ ಬೌಲಿಂಗ್ ನಡೆಸಿ 8 ರನ್ಗಳಿಂದ ಗೆದ್ದು ಬೀಗಿದೆ.
ಚೆನ್ನೈ ನೀಡಿದ 176 ರನ್ಗಳ ಗುರಿ ಬೆನ್ನೆತ್ತಿದ ರಾಯಲ್ಸ್ಗೆ ಆರಂಭದಲ್ಲೇ ದೀಪಕ್ ಚಹಾರ್ ರಹಾನೆ(0) ಹಾಗೂ ಸಂಜು ಸಾಮ್ಸನ್(8) ಆಘಾತ ನೀಡಿದರು. ಇದರ ಬೆನ್ನಲ್ಲೇ ಶಾರ್ದುಲ್ ಬಟ್ಲರ್ ವಿಕೆಟ್ ಪಡೆದು ರಾಜಸ್ಥಾನಕ್ಕೆ ಸೋಲಿನ ದಾರಿ ತೋರಿಸಿದರು.
ಆದರೆ ಈ ಹಂತದಲ್ಲಿ ಒಂದಾದ ತ್ರಿಪಾಠಿ (39) ಹಾಗೂ ಸ್ಮಿತ್ (28) ಜೋಡಿ 51 ರನ್ಗಳ ಜೊತೆಯಾಟ ನೀಡಿದರು. ಇವರಿಬ್ಬರನ್ನು ತಾಹಿರ್ ಪೆವಿಲಿಯನ್ಗಟ್ಟಿ ಸಿಎಸ್ಕೆಗೆ ಗೆಲುವು ಖಚಿತಗೊಳಿಸಿದರು.ನಂತರ ಸ್ಟೋಕ್ಸ್ 46, ಆರ್ಚರ್ 11 ಎಸೆತಗಳಲ್ಲಿ 24 ರನ್ಗಳಿಸಿ ಗೆಲುವಿಗೆ ಹೋರಾಟ ನಡೆಸಿದರಾದರು ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ.
ಬ್ರಾವೋ ಮ್ಯಾಜಿಕ್:
ಕೊನೆಯ ಓವರ್ನಲ್ಲಿ ಆರ್ಆರ್ಗೆ 12 ರನ್ಗಳ ಅಗತ್ಯವಿತ್ತು. ಅನುಭವಿ ಬ್ರಾವೋ ಬೌಲಿಂಗ್ನಲ್ಲಿದ್ದರೆ, ಇತ್ತ ಅಬ್ಬರಿಸಿದ್ದ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್ ಕ್ರೀಸ್ನಲ್ಲಿದ್ದರು. ಮೊದಲ ಎಸೆತದಲ್ಲಿ ಸ್ಟೋಕ್ಸ್ ರೈನಾ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.ನಂತರದ 3 ಎಸೆತದಲ್ಲಿ 2 ರನ್,5 ನೇ ಎಸೆತದಲ್ಲಿ ಶ್ರೇಯಸ್ ಗೋಪಾಲ್ ಔಟ್ 6ನೇ ಎಸೆತದಲ್ಲಿ ಒಂದು ರನ್ ಗಳಿಸಿದ ರಾಯಲ್ಸ್, ಕಿಂಗ್ಸ್ ಎದುರು 8 ರನ್ ಇಂದ ತಲೆ ಬಾಗಿತು.
ಅದ್ಭುತ ಬೌಲಿಂಗ್ ನಡೆಸಿದ ಚಹಾರ್ 19ಕ್ಕೆ2, ತಾಹಿರ್ 23ಕ್ಕೆ2, ಬ್ರಾವೋ 32ಕ್ಕೆ2 ಹಾಗೂ ಟಾಕೂರ್ 42 ಕ್ಕೆ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಸಿಎಸ್ಕೆ 27ಕ್ಕೆ 3 ವಿಕೆಟ್ ಕಳೆದುಕೊಂಡರು ರೈನಾ 36,ಧೋನಿ 75, ಬ್ರಾವೋ 27 ರನ್ಗಳಿಸಿ 176 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು.
ರಾಯಲ್ಸ್ ಪರ ಆರ್ಚರ್ 17 ರನ್ ನೀಡಿ 2 ವಿಕೆಟ್ ಪಡೆದರೆ, ಸ್ಟೋಕ್ಸ್,ಕುಲಕರ್ಣಿ, ಉನಾದ್ಕಟ್ ತಲಾ ಒಂದು ವಿಕೆಟ್ ಪಡೆದರು.