ಚೆನ್ನೈ: ಕಳೆದ ಐಪಿಎಲ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮೊದಲ ಸೀಸನ್ನಲ್ಲೇ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಇಂಗ್ಲೆಂಡ್ನ ಯುವ ಆಲ್ರೌಂಡರ್ ಸ್ಯಾಮ್ ಕರ್ರನ್, ಮುಂದಿನ ಆವೃತ್ತಿಯಲ್ಲಿ ಧೋನಿ ನಾಯಕತ್ವದಲ್ಲಿ ಆಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
2019ರ ಸೀಸನ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 7.2 ಕೋಟಿ ರೂ. ನೀಡಿ ಸ್ಯಾಮ್ ಕರ್ರನ್ರನ್ನು ಖರೀದಿಸಿತ್ತು. ಆದರೆ ದುಬಾರಿಯಾದ್ದರಿಂದ ಅವರನ್ನು 2020ರ ಸೀಸನ್ಗೆ ಉಳಿಸಿಕೊಳ್ಳದೆ ತಂಡದಿಂದ ಕೈಬಿಟ್ಟಿತ್ತು. ಡಿಸೆಂಬರ್ 19ರಂದು ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ 5.5 ಕೋಟಿ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಾಂಚೈಸಿ ಖರೀದಿಸಿತ್ತು.
"ಚೆನ್ನೈ ಬಂದು ನಮ್ಮ ತಂಡದ ಆಟಗಾರರನ್ನು ಭೇಟಿ ಮಾಡುವುದಕ್ಕೆ ನನಗೆ ಕಾಯುವುದಕ್ಕಾಗುತ್ತಿಲ್ಲ. ನಮ್ಮ ನಾಯಕ ಧೋನಿ ಹಾಗೂ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಆಲೋಚನೆಗಳನ್ನು ತಿಳಿದುಕೊಳ್ಳುವುದಕ್ಕೆ ನನಗೆ ಇದೊಂದು ಅದ್ಭುತ ಅವಕಾಶ. ನಾವು ಚೆನ್ನೈಗೆ ಈ ಬಾರಿ ಟ್ರೋಫಿ ಗೆದ್ದುಕೊಡಲಿದ್ದೇವೆ ಎಂಬ ವಿಶ್ವಾಸ ನನಗಿದೆ" ಎಂದು ಸ್ಯಾಮ್ ಕರ್ರನ್ ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಕರ್ರನ್ 2019 ಸೀಸನ್ನಲ್ಲಿ 9 ಪಂದ್ಯಗಳನ್ನಾಡಿದ್ದು, 10 ವಿಕೆಟ್ ಪಡೆದಿದ್ದರು. 11 ರನ್ ನೀಡಿ 4 ವಿಕೆಟ್ ಪಡೆದಿರುವುದು ಇವರ ಅತ್ಯುತ್ತಮ ಬೌಲಿಂಗ್. ಇನ್ನು ಬ್ಯಾಟಿಂಗ್ನಲ್ಲೂ 95 ರನ್ಗಳಿಸಿದ್ದರು. ಇವರ ಗರಿಷ್ಠ ರನ್ 55. ಡೆಲ್ಲಿ ಕ್ಯಾಪಿಟಲ್ ಪರ ಹ್ಯಾಟ್ರಿಕ್ ಕೂಡ ಪಡೆದಿದ್ದರು.