ಅಡಿಲೇಡ್ :ವೇಗಿ ಇಶಾಂತ್ ಶರ್ಮಾ ಅವರ ಅನುಪಸ್ಥಿತಿಯು ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಪೆಟ್ಟು ಎಂದು ಟೆಸ್ಟ್ ಉಪ ನಾಯಕ ಅಜಿಂಕ್ಯ ರಹಾನೆ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.
ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೊನಲು ಬೆಳಕಿನ ಟೆಸ್ಟ್ ಪಂದ್ಯಗಳು ನಡೆಯಲಿದ್ದು, ತಂಡದ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೇಲೆ ತವರಿಗೆ ವಾಪಸ್ ಆಗಲಿದ್ದಾರೆ. ಇದರ ಜೊತೆಗೆ ಗಾಯದಿಂದ ಬಳಲುತ್ತಿರುವ ವೇಗಿ ಇಶಾಂತ್ ಶರ್ಮಾ ಕೂಡ ತಂಡಕ್ಕೆ ಅಲಭ್ಯ ಆಗಲಿದ್ದು, ಇದು ಕೂಡ ದೊಡ್ಡ ಪೆಟ್ಟಾಗಲಿದೆ ಎಂದು ರಹಾನೆ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ರಹಾನೆ ಮೇಲೆ ನಾಯಕತ್ವದ ಒತ್ತಡ ಇಲ್ಲ: ಸುನೀಲ್ ಗವಾಸ್ಕರ್
ಇಶಾಂತ್ ಅನುಭವಿ ಬೌಲರ್. ಬಲಿಷ್ಟ ತಂಡ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಬಲ್ಲರು. ಐಪಿಎಲ್ ಸಮಯದಲ್ಲಿ ಪಕ್ಕೆಲುಬಿನ ಗಾಯದಿಂದ ಇಶಾಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರ ಅಲಭ್ಯ ತಂಡಕ್ಕೆ ಹೆಚ್ಚು ಆಘಾತ ತರಬಹುದು.
ಇಶಾಂತ್ ಅವರ ಅನುಪಸ್ಥಿತಿಯ ಹೊರತಾಗಿಯೂ, ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಜಾಗವನ್ನು ಭರ್ತಿ ಮಾಡುತ್ತಾರೆ ಎಂದು ರಹಾನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ಕೌಶಲ್ಯದ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನಾಡಿದರು.
ವಿರಾಟ್ ಕೊಹ್ಲಿ ಮೊದಲ ಟೆಸ್ಟ್ನಲ್ಲಿ ಕಾಣಿಸಿಕೊಂಡರೆ ಉಳಿದ ಮೂರು ಪಂದ್ಯಗಳಲ್ಲಿ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 17ರಿಂದ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೊನಲು ಬೆಳಕಿನ ಟೆಸ್ಟ್ ಪಂದ್ಯಗಳು ನಡೆಯಲಿವೆ.