ಕ್ಯಾನ್ಬೆರಾ: ಲಿಯಾಮ್ ಲಿವಿಂಗ್‌ಸ್ಟೋನ್ 77ರನ್ ಮತ್ತು ಕ್ಯಾಮರೂನ್ ಬೆನ್‌ಕ್ರಾಫ್ಟ್ ಅಜೇಯ ಅರ್ಧಶತಕ (50), ಮಿಚೆಲ್ ಮಾರ್ಷ್ ಅಜೇಯ 49 ರನ್‌ಗಳ ನೆರವಿನಿಂದ ಬ್ರಿಸ್ಬೇನ್ ಹೀಟ್ ವಿರುದ್ಧ ಪರ್ತ್ ಸ್ಕಾರ್ಚರ್ಸ್ 49 ರನ್‌ಗಳ ಜಯ ಸಾಧಿಸಿ ಬಿಗ್ ಬ್ಯಾಷ್ ಲೀಗ್-10ನೇ ಆವೃತ್ತಿಯ ಫೈನಲ್ಗೇರಿದೆ. ಫೆಬ್ರುವರಿ 6ರಂದು ಸಿಡ್ನಿ ಸಿಕ್ಸರ್ ವಿರುದ್ಧ ಸೆಣಸಾಡಲಿದೆ.
ಬಿಬಿಎಲ್ನ ಚಾಲೆಂಜರ್ಸ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ರಿಸ್ಬೇನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ಆರಂಭಿಕ ಜೇಸನ್ ರಾಯ್ ಅನುಪಸ್ಥಿತಿಯ ಹೊರತಾಗಿಯೂ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಚರ್ಸ್ ಉತ್ತಮ ಮೊತ್ತವನ್ನೇ ಪೇರಿಸಿತು. 39 ಎಸೆತಗಳಲ್ಲಿ 77 ರನ್ ಗಳಿಸಿದ ಲಿಯಾಮ್ ಲಿವಿಂಗ್‌ಸ್ಟೋನ್ ಅರ್ಧ ಡಜನ್ ಸಿಕ್ಸರ್ಗಳನ್ನು ಬಾರಿಸಿದರು. ಕೇವಲ 27 ಎಸೆತಗಳಲ್ಲಿ 50ರ ಗಡಿ ದಾಟಿದರು.
ಬೆನ್‌ಕ್ರಾಫ್ಟ್ ಅವರೊಂದಿಗಿನ ಜೊತೆಯಾಟದಲ್ಲಿ 10ನೇ ಓವರ್‌ನೊಳಗೆ 100 ರನ್ ದಾಟಿದರು. ಮಾರ್ನಸ್ ಲಬುಶೇನ್ನ ಓವರ್ನಲ್ಲಿ ಮೂರು ಸಿಕ್ಸರ್, ಬೌಂಡರಿ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಲಿವಿಂಗ್‌ಸ್ಟೋನ್ ವೇಗಕ್ಕೆ, ಮಿಚೆಲ್ ಸ್ವೆಪ್ಸನ್ 12ನೇ ಓವರ್‌ನ ಮೊದಲ ಎಸೆತದಲ್ಲಿ ತಡೆ ಹಾಕಿದರು. ಅದಾಗಲೇ ತಂಡಕ್ಕೆ 114 ರನ್ಗಳು ಹರಿದು ಬಂದಿದ್ದವು.
ಹೀಟ್ ಹೆಚ್ಚಿಸಿದ ಮಾರ್ಷ್, ಬೆನ್‌ಕ್ರಾಫ್ಟ್
ಲಿವಿಂಗ್‌ಸ್ಟೋನ್ ಔಟಾದ ನಂತರವೂ ರನ್ ವೇಗವನ್ನು ಕಣಕ್ಕಿಳಿದ ಮಿಚೆಲ್ ಮಾರ್ಷ್ ಮತ್ತಷ್ಟು ಹೆಚ್ಚಿಸಿದರು. 15ನೇ ಓವರ್ನಲ್ಲಿ ಸ್ಕಾಚರ್ಸ್ ಪವರ್ ಸರ್ಜ್ ತೆಗೆದುಕೊಂಡಿತು. ಮೋರ್ನೆ ಮಾರ್ಕೆಲ್ ಓವರ್ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿಸಿ 22 ರನ್ ಬಾರಿಸಿದರು. ಪವರ್ ಸರ್ಜ್‌ನಲ್ಲಿ ಒಟ್ಟು 33 ರನ್ ಸೇರಿಸಿದರು. ಬೆನ್‌ಕ್ರಾಫ್ಟ್ ಮತ್ತು ಮಾರ್ಷ್ ದಾಳಿ ಮುಂದುವರೆಯುತ್ತಿದ್ದ ಸಂದರ್ಭದಲ್ಲಿ 19ನೇ ಓವರ್‌ನ ಮೊದಲ ಎಸೆತದ ನಂತರ ಮಳೆ ಸುರಿಯಿತು. ತಮ್ಮ ಮುರಿಯದ 2ನೇ ವಿಕೆಟ್‌ಗೆ 75ರನ್ ಸೇರಿಸಿದರು.