ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ಅಭ್ಯಾಸಕ್ಕೆ ಬಾರದೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿರುವ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇದೀಗ ಜನವರಿಯಲ್ಲಿ ತಮಗೆ ವಿಶ್ರಾಂತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ವಿರಾಟ್ ವಿಶ್ರಾಂತಿಗೆ ಮನವಿ ಹಿನ್ನೆಲೆಯಲ್ಲಿ ಹರಿಣಗಳ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಅವರು ಅಲಭ್ಯರಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಕೆಲವು ದಿನಗಳ ಕಾಲ ಕುಟುಂಬದೊಂದಿಗೆ ಸಮಯ ಕಳೆಯಬೇಕಿರುವುದರಿಂದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಬಯಸಿದ್ದಾರೆ. 2022ರ ಜನವರಿ 22ಕ್ಕೆ ಕೊಹ್ಲಿ, ಅನುಷ್ಕಾ ದಂಪತಿಯ ಪುತ್ರಿ ವಮಿಕಾಗೆ ಒಂದು ವರ್ಷ ತುಂಬಲಿದೆ.
ಮುಂದಿನ ವರ್ಷದ ಜನವರಿಯಲ್ಲಿ ಸಣ್ಣ ಬ್ರೇಕ್ ನೀಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕೊಹ್ಲಿ ಮನವಿ ಮಾಡಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ಕಳೆದ ವಾರವಷ್ಟೇ ರೋಹಿತ್ ಶರ್ಮಾರನ್ನು ಏಕದಿನ ಮಾದರಿಗೆ ನಾಯಕನನ್ನಾಗಿ ಬಿಸಿಸಿಐ ನೇಮಕ ಮಾಡಿತ್ತು. ಆ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ತಂಡವನ್ನು ಮಾತ್ರ ಮುನ್ನಡೆಸುವುದು ಖಾತ್ರಿಯಾಗಿತ್ತು. ಟಿ-20 ತಂಡದ ನಾಯಕ ಸ್ಥಾನ ತೊರೆಯದಂತೆ ಕೊಹ್ಲಿ ಅವರಿಗೆ ಸೂಚಿಸಲಾಗಿತ್ತು ಎಂಬ ಮಾಹಿತಿಯನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗ ಪಡಿಸಿದ್ದರು.
ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿರುವ ರೋಹಿತ್ ಶರ್ಮಾಗೆ 3 ರಿಂದ 4 ವಾರಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಡಿಸೆಂಬರ್ 16 ರಂದು ಹರಿಣಗಳ ನಾಡಿಗೆ ಪ್ರವಾಸ ಬೆಳೆಸಲಿರುವ ಟೀಂ ಇಂಡಿಯಾ ಡಿ.26 ರಿಂದ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಬಳಿಕ 3 ಏಕದಿನ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ:ಏಕದಿನ ತಂಡದಲ್ಲಿ ಶಿಖರ್ ಧವನ್ಗೆ ಅವಕಾಶ ನೀಡುವುದರಲ್ಲಿ ಅರ್ಥವಿಲ್ಲ: ಸಬಾ ಕರೀಮ್