ನವದೆಹಲಿ:ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಹಾಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರು ಜುಲೈನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಆರು ಪಂದ್ಯಗಳ ಸರಣಿಗೆ ಭಾರತೀಯ ತಂಡಕ್ಕೆ ಕೋಚ್ ಆಗಿ ನೇಮಕವಾಗಿದ್ದಾರೆ.
2014 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ದ್ರಾವಿಡ್ ಕಾರ್ಯ ನಿರ್ವಹಿಸಿದ್ದರು. ಬಳಿಕ ಇದೀಗ ಭಾರತೀಯ ತಂಡದೊಂದಿಗೆ ಎರಡನೇ ಬಾರಿ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ರವಿಶಾಸ್ತ್ರಿ, ಭಾರತ್ ಅರುಣ್ ಮತ್ತು ವಿಕ್ರಮ್ ರಾಥೋಡ್ ಮೂವರು ಟೆಸ್ಟ್ ತಂಡದೊಂದಿಗೆ ಇಂಗ್ಲೆಂಡ್‌ನಲ್ಲಿ ಇರುವುದರಿಂದ ಎನ್‌ಸಿಎ ಮುಖ್ಯಸ್ಥರಾದ ರಾಹುಲ್ ದ್ರಾವಿಡ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ದೃಢಪಡಿಸಿದರು.
2019 ರಲ್ಲಿ ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ದ್ರಾವಿಡ್ ಅಂಡರ್ -19 ಭಾರತೀಯ ತಂಡದ ಕೋಚ್ ಆಗಿದ್ದರು.
ಶ್ರೀಲಂಕಾ ಸರಣಿಗೆ ಭಾರತ ತಂಡವನ್ನು ಈ ತಿಂಗಳ ಕೊನೆಯಲ್ಲಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡುವ ಮೊದಲು ತಂಡದ ಆಟಗಾರರು ದ್ವೀಪರಾಷ್ಟ್ರದಲ್ಲಿ ಕ್ವಾರಂಟೈನ್ ಆಗಬೇಕಾಗಿದೆ. ಮೂರು ಏಕದಿನ ಪಂದ್ಯಗಳು ಜುಲೈ 13, 16, 19 ರಂದು ನಡೆಯಲಿದ್ದು, ಟಿ 20 ಐಗಳು ಜುಲೈ 22-27ರವರೆಗೆ ನಡೆಯುವ ಸಾಧ್ಯತೆಯಿದೆ.