ಬೆಂಗಳೂರು:ನಮ್ಮ ಹೆಮ್ಮೆಯ ಕನ್ನಡಿಗರಾದ ರಾಹುಲ್ ದ್ರಾವಿಡ್ ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವುದು ಸಂತೋಷದ ವಿಷಯ. ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.
ಟ್ವೀಟ್ ಮಾಡಿ ಅಭಿನಂದಿಸಿರುವ ಅವರು, ರಾಹುಲ್ ದ್ರಾವಿಡ್ ಅವರ ಸಾರಥ್ಯದಲ್ಲಿ ಭಾರತ ತಂಡವು ಎಲ್ಲಾ ಮಾದರಿಗಳಲ್ಲಿ ಪ್ರಾಬಲ್ಯ ಸಾಧಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಪ್ರಸ್ತುತ ರವಿಶಾಸ್ತ್ರಿ ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸ್ಥಾನವನ್ನು ದ್ರಾವಿಡ್ ಅಲಂಕರಿಸಲಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಆ ಸಂದರ್ಭದಲ್ಲಿ ಕನ್ನಡಿಗ ರಾಹುಲ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಸುಲಕ್ಷಣಾ ನಾಯಕ್ ಹಾಗೂ ಆರ್.ಪಿ. ಸಿಂಗ್ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಅವಿರೋಧವಾಗಿ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಿದೆ.
ಇನ್ನು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆಯಾಗುತ್ತಿದ್ದಂತೆ ಕ್ರಿಕೆಟ್ ದಿಗ್ಗಜರು ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ. ರಾಹುಲ್ ದ್ರಾವಿಡ್ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿಸಿದ್ದಾರೆ.