ನವದೆಹಲಿ:ಇಂದಿನ ದಿನ ಭಾರತದ ಕ್ರೀಡಾ ಇತಿಹಾಸದಲ್ಲಿ ಅದರಲ್ಲೂ ಕ್ರಿಕೆಟ್ ಪ್ರಿಯರಿಗೆ ಸ್ಮರಣೀಯ ದಿನ. ಏಕೆಂದರೆ ಇಂದಿಗೆ ಸರಿಯಾಗಿ 27 ವರ್ಷಗಳ ಹಿಂದೆ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೊದಲ ಏಕದಿನ ಶತಕ ಬಾರಿಸಿದ್ದರು.
ಏಕದಿನ ಪಂದ್ಯದಲ್ಲಿ ಮೊದಲ ಶತಕ ದಾಖಲಿಸಲು ಸಚಿನ್ ತೆಂಡೂಲ್ಕರ್ ತೆಗೆದುಕೊಂಡಿದ್ದು, ಬರೋಬ್ಬರಿ 79 ಪಂದ್ಯಗಳು ಅಥವಾ ಐದು ವರ್ಷ. ಸಚಿನ್ ತಮ್ಮ ಕ್ರಿಕೆಟ್ ಜೀವನದಲ್ಲಿ 49 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ಈ ಏಕದಿನ ಶತಕಗಳಿಗೆ ಮೊದಲು ಬುನಾದಿ ಹಾಕಿದ್ದೇ 27 ವರ್ಷಗಳ ಹಿಂದೆ, ಅದೂ ಶ್ರೀಲಂಕಾದ ಕೊಲೊಂಬೋದಲ್ಲಿ..
ಅದು ಸೆಪ್ಟೆಂಬರ್ 9, 1994.. ಶ್ರೀಲಂಕಾದ ಕೊಲೊಂಬೋದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ತೆಂಡೂಲ್ಕರ್ 130 ಎಸೆತಗಳಲ್ಲಿ 110 ರನ್ ಗಳಿಸಿದ್ದರು. ಟೀಂ ಇಂಡಿಯಾ ಬೇರೆ ಆಟಗಾರರು ಯಾರೂ 50ರನ್ಗಳ ಗಡಿ ದಾಟಿರಲಿಲ್ಲ.
ಸಚಿನ್ ತೆಂಡೂಲ್ಕರ್ ಅವರ ಈ ಶತಕದಿಂದಾಗಿ ಭಾರತ 31 ರನ್ಗಳ ಅಂತರದಿಂದ ಗೆಲುವು ಕಂಡಿತ್ತು. ಎರಡು ಸಿಕ್ಸರ್ ಮತ್ತು ಎಂಟು ಫೋರ್ಗಳ ಮೂಲಕ ಶತಕ ದಾಖಲಿಸಿದ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂದಿತ್ತು.