ಕೋಲ್ಕತ್ತಾ: ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್(Clean sweep Victory) ಮಾಡಿಕೊಂಡಿದೆ. 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 73 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ 3-0 ಅಂತರದಲ್ಲಿ ರೋಹಿತ್ ಪಡೆ ಸರಣಿ ಗೆದ್ದುಕೊಂಡಿತು.
3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿಯಿತು. ಆರಂಭಿಕರಾಗಿ ಆಗಮಿಸಿದ ರೋಹಿತ್ ಶರ್ಮಾ (56 ರನ್), ಇಶಾನ್ ಕಿಶನ್ (29) ರನ್ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು.
ತಂಡದ ಮೊತ್ತ 69 ಆಗಿದ್ದಾಗ ಇಶಾನ್ ಕಿಶನ್ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸೂರ್ಯ ಕುಮಾರ್ ಯಾದವ್ ಸೊನ್ನೆ ಸುತ್ತಿದರೆ, ರಿಶಭ್ ಪಂತ್ (4) ರನ್ ಬಾರಿಸಿ ಹೊರ ನಡೆದರು. ಶ್ರೇಯಸ್ ಅಯ್ಯರ್ 25, ವೆಂಕಟೇಶ್ ಐಯ್ಯರ್ 20, ಹರ್ಶದ್ ಪಟೇಲ್ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಕ್ಸರ್ ಪಟೇಲ್ (2), ದೀಪಕ್ ಚಹರ್ 8 ಎಸೆತಗಳಲ್ಲಿ 21 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.
ನ್ಯೂಜಿಲೆಂಡ್ ಪರ ಮಿಚೆನ್ ಸ್ಯಾಂಟ್ನರ್ 3, ಟ್ರೆಂಟ್ ಬೌಲ್ಟ್, ಆ್ಯಡಂ ಮಿಲ್ನೆ, ಫರ್ಗುಸನ್, ಇಶ್ ಶೋಧಿ ತಲಾ 1 ವಿಕೆಟ್ ಕಬಳಿಸಿದರು.
ಬಳಿಕ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 17.2 ಓವರ್‌ಗಳಲ್ಲಿ 111 ರನ್‌ಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಪರ ಗಪ್ಟಿಲ್ 51 ರನ್ ಬಾರಿಸಿದ್ದು ಬಿಟ್ಟರೆ ಯಾರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಭಾರತದ ಪರ ಅಕ್ಷರ್ ಪಟೇಲ್ 3, ಹರ್ಷಲ್ ಪಟೇಲ್ 2, ದೀಪಕ್ ಚಹರ್, ವೆಂಕಟೇಶ್ ಅಯ್ಯರ್, ಚಹಲ್ ತಲಾ 1 ವಿಕೆಟ್ ಕಬಳಿಸಿದರು.