ಗಾಲೆ (ಶ್ರೀಲಂಕಾ):ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾಕ್ಕೆ ಆ್ಯಂಜಲೋ ಮ್ಯಾಥ್ಯೂಸ್ ಅವರ ಅಜೇಯ ಶತಕ ನೆರವಾಗಿದೆ. ಈ ಮೂಲಕ ಲಂಕಾ ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 229 ರನ್ (87 ಓವರ್) ಪೇರಿಸಲು ಯಶಸ್ವಿಯಾಗಿದೆ.
ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಕುಶಾಲ್ ಪೆರೇರಾ ಕೇವಲ 6 ರನ್, ನಂತರ ಕ್ರೀಸ್ಗೆ ಬಂದ ಒಶಾಡೋ ಫರ್ನಾಂಡೋ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿದರು. ಕೇವಲ 7 ರನ್ಗೆ 2 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು. ಇಬ್ಬರೂ ಜೇಮ್ಸ್ ಆ್ಯಂಡರ್ಸನ್ಗೆ ಔಟಾದರು.
ಬಳಿಕ ಜೊತೆಯಾದ ಆರಂಭಿಕ ಆಟಗಾರ ಲಹಿರು ತಿರಿಮನ್ನೆ ಮತ್ತು ಆ್ಯಂಜಲೋ ಮ್ಯಾಥ್ಯೂಸ್ 50 ರನ್ ಜೊತೆಯಾಟವಾಡಿದರು. ತಂಡದ ಮೊತ್ತ ಏರಿಸುತ್ತಿದ್ದ ಸಂದರ್ಭದಲ್ಲಿ ಆ್ಯಂಡರ್ಸನ್ ಬೌಲಿಂಗ್ನಲ್ಲಿ ತಿರಿಮನ್ನೆ 43 ರನ್ ಗಳಿಸಿದ್ದ ಸಂದರ್ಭದಲ್ಲಿ ಜೋಸ್ ಬಟ್ಲರ್ಗೆ ಕ್ಯಾಚಿತ್ತರು. ಆಗ ತಂಡದ ಮೊತ್ತ 76 ಆಗಿತ್ತು. ನಂತರ ಕ್ರೀಸ್ಗೆ ಬಂದ ದಿನೇಶ್ ಚಾಂಡಿಮಾಲ್ ಮತ್ತು ಮ್ಯಾಥ್ಯೂಸ್ ತಂಡಕ್ಕೆ ಗೋಡೆಯಾಗಿ ನಿಂತರು.
ಇದನ್ನೂ ಓದಿ...ಕೊಹ್ಲಿ ನಾಯಕತ್ವ ಬದಲಾವಣೆಯು ತಂಡದ ಸಂಸ್ಕೃತಿ ನಾಶಕ್ಕೆ ಕಾರಣ: ಬ್ರಾಡ್ ಹಗ್
ಈ ವೇಳೆ ಮ್ಯಾಥ್ಯೂಸ್ ನೂರರ (107) ಗಡಿ ದಾಟಿದರೆ, ಚಾಂಡಿಮಾಲ್ ಅರ್ಧಶತಕ (52) ಪೂರೈಸಿದರು. ನಂತರ ಮಾರ್ಕ್ ವುಡ್ ಬೌಲಿಂಗ್ನಲ್ಲಿ ಚಾಂಡಿಮಾಲ್ ಬಲಿಯಾದರು. ಸದ್ಯ ನಿರೋಶಾನ್ ಡಿಕ್ವೆಲ್ಲಾ (19) ಮತ್ತು ಮ್ಯಾಥ್ಯೂಸ್ ಕ್ರೀಸ್ನಲ್ಲಿದ್ದು, ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಆ್ಯಂಡರ್ಸನ್ 3, ಮಾರ್ಕ್ವುಡ್ 1 ವಿಕೆಟ್ ಕಿತ್ತಿದ್ದಾರೆ. ಲಂಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದೆ.