ಕಾನ್ಪುರ್: ಟೀಂ ಇಂಡಿಯಾದ ಆರಂಭಿಕ ಬ್ಯಾಟರ್, ಕನ್ನಡಿಗ ಕೆ.ಎಲ್. ರಾಹುಲ್ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದ ಔಟ್ ಆಗಿದ್ದಾರೆ. ರಾಹುಲ್ ಬದಲಾಗಿ ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ನೀಡಲಾಗಿದೆ.
KL Rahul: ಕೆ.ಎಲ್. ರಾಹುಲ್ ಎಡಗಾಲಿನ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಮುಂಬರುವ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಪೇಟಿಎಂ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ತಯಾರಿಗಾಗಿ ರಾಹುಲ್ ಅವರು ಎನ್‌ಸಿಎಗೆ ತೆರಳಲಿದ್ದಾರೆ ಎಂದು ಹೇಳಿದೆ. ಇಂದು ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಟೀಂ ಇಂಡಿಯಾದ ಅಭ್ಯಾಸ ಸೆಷನ್‌ನಲ್ಲಿ ರಾಹುಲ್ ಕಾಣಿಸಿಕೊಂಡಿರಲಿಲ್ಲ.
29 ವರ್ಷದ ರಾಹುಲ್ 40 ಟೆಸ್ಟ್ ಪಂದ್ಯಗಳಲ್ಲಿ 35.16 ಸರಾಸರಿಯಲ್ಲಿ 2,321 ರನ್ ಗಳಿಸಿದ್ದಾರೆ. 2016ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 199 ರನ್ ಅವರ ವೈಯಕ್ತಿಕ ಗರಿಷ್ಠ ರನ್ ಗಳಿಸಿದ್ದಾರೆ.
ಮಯಾಂಕ್, ಗಿಲ್ ಆರಂಭಿಕರಾಗಿ ಕಣ್ಣಕ್ಕೆ?
ಕಿವೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರೊಂದಿಗೆ ಶುಭಮನ್ ಗಿಲ್ ಆರಂಭಿಕರಾಗಿ ಕಣ್ಣಕ್ಕಿಳಿಯುವ ಸಾಧ್ಯತೆ ಇದೆ. ಶ್ರೇಯಸ್ ಅಯ್ಯರ್ ಅಥವಾ ಸೂರ್ಯಕುಮಾರ್ ಯಾದವ್ ಟೆಸ್ಟ್‌ಗೆ ಪದಾರ್ಪಣೆ ಮಾಡಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಅಂತಲೂ ಹೇಳಲಾಗುತ್ತಿದೆ.
ಈ ಮೊದಲು ಯುವ ಬ್ಯಾಟರ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆ ಇತ್ತು. ಆದರೆ ರಾಹುಲ್ ಅನುಪಸ್ಥಿತಿಯಲ್ಲಿ, ಅವರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಗೊತ್ತಾಗಿದೆ. ನವೆಂಬರ್ 25(ಗುರುವಾರ) ರಿಂದ ಕಾನ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.