ನಾಟಿಂಗ್‌ಹ್ಯಾಮ್:ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಮೈದಾನದಲ್ಲಿ ಕ್ರಿಕೆಟ್ಗಿಂತ ವರುಣನ ಆರ್ಭಟವೇ ಹೆಚ್ಚಾಗಿತ್ತು. ಕೊನೆಗೂ ಮಳೆ ನಿಲ್ಲದೆ, ದಿನದಾಟ ಅಂತ್ಯಗೊಂಡಿದೆ.
ದಿನದಾಟದಲ್ಲಿ ಕೇವಲ 33.4 ಓವರ್‌ಗಳು ಮಾತ್ರ ಸಾಧ್ಯವಾಗಿದ್ದು, ಅವುಗಳಲ್ಲಿ ಹೆಚ್ಚಿನ ಓವರ್‌ಗಳು ಬೆಳಗ್ಗಿನ ಅವಧಿಯಲ್ಲೇ ನಡೆದಿವೆ. ಭೋಜನ ವಿರಾಮದ ಬಳಿಕ ಪದೇ ಪದೇ ಮಳೆ ಕಾಡಿದ್ದರಿಂದ ಆಟಕ್ಕೆ ಅಡಚಣೆಯುಂಟಾಯಿತು. ಬುಧವಾರ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದ್ದ ಭಾರತ ಗುರುವಾರವೂ ಉತ್ತಮ ಆರಂಭ ಮುಂದುವರೆಸಿತು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ(36) ಮತ್ತು ರಾಹುಲ್ ಮೊದಲ ವಿಕೆಟ್ಗೆ 97 ರನ್ ಜೊತೆಯಾಟವಾಡಿದರು.
ಈ ವೇಳೆ 107 ಎಸೆತಗಳಲ್ಲಿ 36 ರನ್ಗಳಿಸಿದ್ದ ರೋಹಿತ್ ಶರ್ಮಾ ರಾಬಿನ್ಸನ್ ಓವರ್ನಲ್ಲಿ ಔಟ್ ಆದರು. ಬಳಿಕ ಭಾರತ ಕೇವಲ 8 ರನ್ ಅಂತರದಲ್ಲಿ ಚೇತೇಶ್ವರ್ ಪೂಜಾರ (4) ವಿರಾಟ್ ಕೊಹ್ಲಿ (0) ಮತ್ತು ಅಜಿಂಕ್ಯ ರಹಾನೆ (5) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಜೇಮ್ಸ್ ಆ್ಯಂಡರ್ಸನ್ ಸತತ ಎರಡು ಎಸೆತಗಳಲ್ಲಿ ಪೂಜಾರ ಮತ್ತು ಕೊಹ್ಲಿ ವಿಕೆಟ್ ಕಬಳಿಸಿ ಇಂಗ್ಲೆಂಡ್ಗೆ ಮೇಲುಗೈ ಒದಗಿಸಿದರು. ಬಳಿಕ ಅಜಿಂಕ್ಯ ರಹಾನೆ ಕೂಡ ಅನಾವಶ್ಯಕ ರನ್ ಗಳಿಸಲು ಯತ್ನಿಸಿ ರನ್ಔಟ್ ಆದರು.