ಅಡಿಲೇಡ್: ಇಂಡೋ-ಆಸೀಸ್ ಟೆಸ್ಟ್ ಕ್ರಿಕೆಟ್ ಸರಣಿ ಡಿಸೆಂಬರ್ 17ರಂದು ಶುರುವಾಗಲಿದೆ. ಬಲಿಷ್ಟ ಆಸ್ಟ್ರೇಲಿಯಾ ತಂಡ ಇಬ್ಬರು ಅನುಭವಿ ಆಟಗಾರರ ಲಭ್ಯತೆಯಲ್ಲಿ ಮುಂದುವರೆಯಲಿದ್ದು, ಇದು ಹೆಚ್ಚು ಪರಿಣಾಮಕಾರಿ ಎಂದು ಆಸ್ಟ್ರೇಲಿಯಾದ ಬಲಗೈ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರುವಾರ ಇಂಡೋ-ಆಸೀಸ್ ಟೆಸ್ಟ್ ಕ್ರಿಕೆಟ್ ಸರಣಿ ಪ್ರಾರಂಭವಾಗಲಿದೆ. ಮುಂಬರುವ ಟೆಸ್ಟ್ ಸರಣಿಯಲ್ಲಿ ಅನುಭವಿ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಉಪಸ್ಥಿತಿಯು ನಮಗೆ ಈ ಬಾರಿ ಹೆಚ್ಚು ಆತ್ಮ ವಿಶ್ವಾಸ ತುಂಬಲಿದೆ ಎಂದಿದ್ದಾರೆ.
ಇದನ್ನೂ ಓದಿ : ಮೊದಲ ಟೆಸ್ಟ್ನಿಂದ ಅಬಾಟ್ ಹೊರಕ್ಕೆ: ಆಸೀಸ್ ತಂಡ ಸೇರಿಕೊಂಡ ಮೊಯಿಸಸ್ ಹೆನ್ರಿಕ್ಸ್
ಕೊಹ್ಲಿ ಬಳಗ ಕಳೆದ ಬಾರಿ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಂದರ್ಭದಲ್ಲಿ ಆತಿಥೇಯರಿಗೆ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸೇವೆ ಇರಲಿಲ್ಲ. ಹಾಗಾಗಿ ವಾರ್ನರ್ ಮತ್ತು ಸ್ಮಿತ್ ಅನುಪಸ್ಥಿತಿಯಲ್ಲಿ ಭಾರತವು 2018ರಲ್ಲಿ ಟೆಸ್ಟ್ ಸರಣಿಯನ್ನು 2-1ರಿಂದ ಸುಲಭವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆದರೆ, ಈ ಬಾರಿ ಸ್ಮಿತ್ ಮತ್ತು ವಾರ್ನರ್ ಅವರ ಸೇವೆ ನಮಗೆ ಹೆಚ್ಚು ಸ್ಫೂರ್ತಿ ತಂದಿದೆ.
ಜೊತೆಗೆ ಅವರ ಬ್ಯಾಟಿಂಗ್ನಿಂದ ಕಳೆದ ಎರಡು ವರ್ಷಗಳಲ್ಲಿ ಆಸ್ಟ್ರೇಲಿಯಾವು ಟೆಸ್ಟ್ ಕ್ರಿಕೆಟ್ನಲ್ಲಿ ಸಾಕಷ್ಟು ಬೆಳೆದಿದೆ. ಸ್ಮಿತ್ ಮತ್ತು ವಾರ್ನರ್ ಹೊರತಾಗಿಯೂ ಮಾರ್ನಸ್ ಕೂಡ ಉತ್ತಮ ಲಯದಲ್ಲಿದ್ದಾರೆ. ಇದರ ಜೊತೆಗೆ ನಾವು ಒಂದಿಬ್ಬರು ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ತಮ್ಮ ತಂಡದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತವು ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಹೊಂದಿದೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಉತ್ತಮ ಲಯದಲಿದ್ದಾರೆ. ಕಳೆದ ಬಾರಿಯೂ ಮೊಹಮ್ಮದ್ ಶಮಿ, ಬುಮ್ರಾ ಮತ್ತು ಇಶಾಂತ್ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಬುಮ್ರಾ ಮತ್ತು ಶಮಿ 140 ಕಿ.ಮೀ/ಗಂ ವೇಗದಲ್ಲಿ ಬೌಲಿಂಗ್ ಮಾಡಬಹುದು.
ಕಳೆದ ಬಾರಿಯೂ ಇದೇ ರೀತಿಯ ಉತ್ತಮ ಪ್ರದರ್ಶನ ನೀಡಿದ್ದರು. ಈ ತರಹದ ಬೌಲಿಂಗ್ ದಾಳಿಯನ್ನು ಎದುರಿಸುವುದು ಸ್ವಲ್ಪ ಕಷ್ಟವಾಗಬಹುದು. ಆದರೆ, ನಮ್ಮ ತಂಡ ಬ್ಯಾಟಿಂಗ್ನಲ್ಲಿ ಲಯ ಹೊಂದಿದ್ದರಿಂದ ಸುಲಭವಾಗಿ ಎದುರಿಸಿದರು. ಈ ಬಾರಿಯೂ ಅದೇ ರೀತಿಯ ಪ್ರದರ್ಶನ ತೋರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.