ಮೆಲ್ಬೋರ್ನ್ (ಆಸ್ಟ್ರೇಲಿಯಾ): ಮುಂಬರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪರ ಆರಂಭಿಕರಾಗಿ ಡೇವಿಡ್ ವಾರ್ನರ್ ಮೈದಾನಕ್ಕಿಳಿಯಲಿದ್ದಾರೆ ಎಂದು ಟಿ-20 ತಂಡದ ನಾಯಕ ಆ್ಯರನ್ ಫಿಂಚ್ ಹೇಳಿದ್ದಾರೆ.
2020ರ ಸೆಪ್ಟೆಂಬರ್‌ನಿಂದ ವಾರ್ನರ್ ಆಸ್ಟ್ರೇಲಿಯಾ ಪರವಾಗಿ ಒಂದೇ ಒಂದು ಟಿ-20 ಪಂದ್ಯವಾಡಿಲ್ಲ. ಜೊತೆಗೆ ಗಾಯದ ಸಮಸ್ಯೆ ಹಾಗೂ ಬೇರೆ ಪಂದ್ಯಗಳ ಕಾರಣದಿಂದಾಗಿಯೂ ಅವರು 14 ಪಂದ್ಯಗಳಿಂದ ಹೊರಗುಳಿದಿದ್ದರು.
ಈ ನಡುವೆ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ಹೈದರಾಬಾದ್ ತಂಡದಿಂದಲೂ ಹೊರಗುಳಿಯಬೇಕಾಯಿತು. ಅವರ ಫಾರ್ಮ್ ಕುರಿತು ಟೀಕೆಗಳು ಕೇಳಿಬಂದ ನಡುವೆಯೂ ಇದೀಗ ಆಸ್ಟ್ರೇಲಿಯಾ ಆರಂಭಿಕರಾಗಿ ವಾರ್ನರ್ ಮೈದಾನಕ್ಕಿಳಿಯಲಿದ್ದಾರೆ ಎಂದು ಫಿಂಚ್ ದೃಢಪಡಿಸಿದ್ದಾರೆ.
ಫಿಂಚ್ ಸಹ ಗಾಯದ ಸಮಸ್ಯೆಯಿಂದ ಹೊರಬಂದು ಟಿ-20 ವಿಶ್ವಕಪ್ ಆಡಲಿದ್ದಾರೆ. ಇದಕ್ಕೂ ಮೊದಲು ಮೊಣಕಾಲು ನೋವಿನ ಸಮಸ್ಯೆಯಿಂದ ಬಾಂಗ್ಲಾದೇಶ ವಿರುದ್ಧದ ಪ್ರವಾಸದಲ್ಲೂ ಭಾಗಿಯಾಗಲಿಲ್ಲ.