ಜೋಹಾನ್ಸ್‌ಬರ್ಗ್:ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಎರಡನೇ ಏಕದಿನ ಪಂದ್ಯದಲ್ಲಿ ದ. ಆಫ್ರಿಕಾ 17 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಿವೆ.
ಭಾನುವಾರ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ 17 ರನ್‌ಗಳಿಂದ ಸೋತಿತು. ತಂಡದ ಆರಂಭಿಕ ಬ್ಯಾಟ್ಸ್‌ಮನ್ ಫಖರ್ ಜಮಾನ್ 155 ಎಸೆತಗಳಲ್ಲಿ 18 ಬೌಂಡರಿ, 10 ಸಿಕ್ಸರ್ ನೆರವಿನಿಂದ 193 ರನ್ಗಳಿಸಿ ಕೊನೆಯವರೆಗೂ ಹೋರಾಡಿದರು. ಆದ್ರೆ ಗೆಲುವು ಮಾತ್ರ ಹರಿಣಗಳ ಪಾಲಾಯಿತು.
ದಕ್ಷಿಣ ಆಫ್ರಿಕಾ ನೀಡಿದ 342 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ 38ನೇ ಓವರ್ ಮುಕ್ತಾಯಕ್ಕೆ ಏಳು ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತ್ತು. ಹೀಗಾಗಿ ಪಾಕ್ ಈ ಪಂದ್ಯದಲ್ಲಿ ಸುಲಭವಾಗಿ ಸೋಲೊಪ್ಪಿಕೊಳ್ಳುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಮಾಡಿದ ಫಖರ್ ಜಮಾನ್, ಉಳಿದ ಬ್ಯಾಟ್ಸ್‌ಮನ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸುವ ಭರವಸೆ ಮೂಡಿಸಿದ್ದರು. ದ್ವಿಶತಕದತ್ತ ಹೆಜ್ಜೆ ಹಾಕಿದ್ದ ಅವರು ಕೊನೆಯ ಓವರ್‌ನಲ್ಲಿ ಔಟಾಗುವ ಮೂಲಕ ತಂಡದ ಗೆಲುವಿನ ಆಸೆಗೆ ತಣ್ಣೀರೆರಚಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ 86 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ನೆರವಿನಿಂದ 80 ರನ್ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ತೆಂಬಾ ಬವುಮಾ 102 ಎಸೆತಗಳಲ್ಲಿ 9 ಬೌಂಡರಿ ಸಮೇತ 92 ರನ್ಗಳಿಸಿದರು. ಇತ್ತ ಅಬ್ಬರದ ಬ್ಯಾಟಿಂಗ್ ನಡೆಸಿದ ವ್ಯಾನ್ ಡೆರ್ ಡುಸೆನ್ ಕೇವಲ 37 ಎಸೆತಗಳಲ್ಲಿ, 6 ಬೌಂಡರಿ, 4 ಸಿಕ್ಸರ್ ಸಮೇತ 60 ರನ್ಗಳಿಸಿದರೆ, ಡೇವಿಡ್ ಮಿಲ್ಲರ್ ಔಟಾಗದೆ 27 ಎಸೆತಗಳಲ್ಲಿ, 3 ಬೌಂಡರಿ, 3 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ತಂಡದ ಮೊತ್ತವನ್ನ 300ರ ಗಡಿ ದಾಟಿಸಿದರು.