ಸೇಂಟ್ ಲೂಸಿಯಾ: ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ಕ್ರಿಕೆಟ್ ಮಾಂತ್ರಿಕ ಕ್ರಿಸ್ ಗೇಲ್ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಕ್ರಿಸ್ ಗೇಲ್ 38 ಎಸೆತಗಳಲ್ಲಿ 67 ರನ್‌ಗಳ ಬಿರುಸಿನ ಆಟವಾಡಿ ಟಿ20 ಇತಿಹಾಸದಲ್ಲೇ 14 ಸಾವಿರ ರನ್ ಗಳಿಸಿರುವ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾರ್ಚ್ 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 100 ರನ್ ಗಳಿಸಿದ ನಂತರ ಕ್ರಿಸ್ ಗೇಲ್ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೊದಲ ಬಾರಿಗೆ 50 ರನ್ ಗಡಿ ದಾಟಿದರು. ಗೇಲ್ ಅವರ ಅದ್ಭುತ ಆಟದಿಂದಾಗಿ ವೆಸ್ಟ್ ಇಂಡೀಸ್ 6 ವಿಕೆಟ್ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.
41 ವರ್ಷದ ಕ್ರಿಸ್ ಗೇಲ್ ಈಗ 431 ಟಿ 20 ಪಂದ್ಯಗಳಲ್ಲಿ 37.63 ಸರಾಸರಿಯಲ್ಲಿ 14,038 ರನ್ ಗಳಿಸಿದ್ದಾರೆ. ಗೇಲ್ ಇಲ್ಲಿಯವರೆಗೆ 22 ಶತಕ ಮತ್ತು 87 ಅರ್ಧಶತಕಗಳನ್ನು ಗಳಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್ 545 ಪಂದ್ಯಗಳಲ್ಲಿ 10,836 ರನ್ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶೋಯೆಬ್ ಮಲಿಕ್ ಇದುವರೆಗೆ 425 ಟಿ 20 ಪಂದ್ಯಗಳಲ್ಲಿ 10,741 ರನ್ ಗಳಿಸಿದ್ದಾರೆ.