ಓಮನ್:ಇಲ್ಲಿ ನಡೆಯುತ್ತಿರುವ ಅಮೆರಿಕ ಹಾಗೂ ಪಪುವಾ ನ್ಯೂ ಗಿನಿಯಾ ನಡುವಿನ 2ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಭಾರತ ಮೂಲದ ಯುಎಸ್ಎ ಆಟಗಾರ ಜಸ್ಕರನ್ ಮಲ್ಹೋತ್ರ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಜಸ್ಕರನ್ ತಂಡ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೈದಾನಕ್ಕಿಳಿದಿದ್ದರು. ಆರಂಭದಲ್ಲೇ ಭರ್ಜರಿ ಹೊಡೆತಕ್ಕೆ ಕೈಹಾಕಿದ ಅವರು ಸತತ ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಸಿಡಿಸಿ ಇತಿಹಾಸ ಬರೆದಿದ್ದಾರೆ.
6 ಬಾಲ್ಗಳಲ್ಲಿ 6 ಸಿಕ್ಸರ್ ಸಿಡಿಸಿದ ವಿಶ್ವದ ಎರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಮೊದಲನೆಯಾಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ಈ ಸಾಧನೆ ಮಾಡಿದವರಾಗಿದ್ದಾರೆ.
ಜಸ್ಕರನ್ ಒಟ್ಟು 124 ಬಾಲ್ ಎದುರಿಸಿ ಬರೋಬ್ಬರಿ 173ರನ್ ಗಳಿಸಿದರು. ಇದು ಅವರ ವೈಯಕ್ತಿಕ ಅತೀ ಹೆಚ್ಚು ರನ್ ಎನಿಸಿಕೊಂಡಿದೆ. ಜೊತೆಗೆ 4 ಬೌಂಡರಿ ಹಾಗೂ 16 ಸಿಕ್ಸರ್ ಸಿಡಿಸಿ ಮೈದಾನದಲ್ಲಿ ಧೂಳೆಬ್ಬಿಸಿದರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತೀ ಹೆಚ್ಚು ರನ್ ಗಳಿಸಿ ಸೌತ್ ಆಫ್ರಿಕಾದ ಎಬಿ ಡಿ ವಿಲಿಯರ್ಸ್ (162) ಅವರ ಸಾಧನೆಯನ್ನ ಜಸ್ಕರನ್ ಸರಿಗಟ್ಟಿದ್ದಾರೆ.
ಜಸ್ಕರನ್ ಭಾರತದ ಚಂಢೀಗಡ ಮೂಲದವರಾಗಿದ್ದು, 2014ರಲ್ಲಿ ಅಮೆರಿಕ ಕ್ರಿಕೆಟ್ ತಂಡದ ಪರವಾಗಿ ಆಡಲು ತೆರಳಿದ್ದರು. ಇವರು 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಸದ್ಯ ಅವರಿಗೀಗ 31 ವರ್ಷವಾಗಿದ್ದು, ವಿಶ್ವ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ:T-20 World Cup: ಕೆರಿಬಿಯನ್ ತಂಡ ಪ್ರಕಟ.. ನರೇನ್ ಔಟ್, ರಾಮ್ಪಾಲ್ ಕಮ್ಬ್ಯಾಕ್!