ಲಂಡನ್:ಭದ್ರತೆಯ ಕಾರಣ ನೀಡಿ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದು, ಬ್ರಿಟಿಷ್ ಹೈಕಮಿಷನ್ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಪಾಕಿಸ್ತಾನಕ್ಕೆ ಪತ್ರ ಬರೆದಿರುವ ಬ್ರಿಟಿಷ್ ಹೈಕಮಿಷನ್, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಖುದ್ದಾಗಿ ತೆಗೆದುಕೊಂಡಿರುವ ನಿರ್ಧಾರ ಇದು. ಇದರಲ್ಲಿ ನಾವು ಯಾವುದೇ ರೀತಿ ಹಸ್ತಕ್ಷೇಪ ಮಾಡಿಲ್ಲ. ಈ ಹಿಂದೆ ಪಾಕ್ ಪ್ರವಾಸ ಕೈಗೊಳ್ಳಲು ಇಂಗ್ಲೆಂಡ್ ಬೋರ್ಡ್ ನಿರ್ಧಾರಿಸಿದಾಗ ನಾವು ಅದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೆವು ಎಂದು ಹೇಳಿಕೊಂಡಿದೆ. ಇದರ ಜೊತೆಗೆ 2022ರಲ್ಲಿ ಪಾಕ್ ಪ್ರವಾಸ ಕೈಗೊಂಡು ಟಿ-20 ಸರಣಿಯಲ್ಲಿ ಭಾಗಿಯಾಗುವಂತೆ ಮಾಡಲು ಎಲ್ಲ ರೀತಿಯ ಪ್ರಯತ್ನ ಕೈಗೊಳ್ಳುವುದಾಗಿಯೂ ಭರವಸೆ ನೀಡಿದೆ.
ಕ್ರಿಕೆಟಿಗರ ಸುರಕ್ಷತೆ ದೃಷ್ಟಿಯಿಂದ ಇಸಿಬಿ ಈ ನಿರ್ಧಾರ ಕೈಗೊಂಡಿದೆ. ಇದಕ್ಕೆ ನಾವು ಸಂಪೂರ್ಣವಾಗಿ ಬೆಂಬಲ ಸೂಚಿಸುತ್ತೇವೆ ಎಂದು ತಿಳಿಸಿದೆ. ಇತ್ತೀಚೆಗೆ, 18 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ಭದ್ರತೆ ಕಾರಣ ನೀಡಿ, ತಮ್ಮ ಪ್ರವಾಸ ಮೊಟಕುಗೊಳಿಸಿತ್ತು. ಇದೇ ಹಾದಿ ತುಳಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮುಂದಿನ ತಿಂಗಳು ಪಾಕ್ ನೆಲದಲ್ಲಿ ನಡೆಯಬೇಕಾಗಿದ್ದ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಸರಣಿ ರದ್ದುಗೊಳಿಸಿದೆ.
ಇದನ್ನೂ ಓದಿ:ಪಾಕ್ ಕ್ರಿಕೆಟ್ಗೆ ಮತ್ತೆ ಮುಖಭಂಗ: ಕಿವೀಸ್ ಬೆನ್ನಲ್ಲೇ ಇಂಗ್ಲೆಂಡ್ನಿಂದಲೂ ಪಾಕ್ ಪ್ರವಾಸ ರದ್ಧು
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪಾಕ್ ವಿರುದ್ಧದ ಪ್ರವಾಸ ರದ್ದು ಮಾಡಿಕೊಳ್ಳುತ್ತಿದ್ದಂತೆ ಪಾಕ್‌ನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.