ಢಾಕಾ:ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ಗಳ ಸರಣಿಯನ್ನು ಸೋತ ನಂತರ ಬಾಂಗ್ಲಾದೇಶ ತಂಡದ ನಾಯಕ ಮೊಮಿನುಲ್ ಹಕ್ ಮತ್ತು ಕೋಚ್ ರೆಸೆಲ್ ಡೊಮಿಂಗೋ ವಿರುದ್ಧ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 17 ರನ್ಗಳ ಅಂತರದಿಂದ ವೆಸ್ಟ್ ಇಂಡೀಸ್ ತಂಡ ಮಣಿಸಿದೆ. ರಕೀಮ್ ಕಾರ್ನವಾಲ್ಗೆ 4 ವಿಕೆಟ್, ಕ್ರೆಗ್ ಬ್ರಾಥ್ವೈಟ್ ಮತ್ತು ಜೊಮೆಲ್ ವಾರಿಕಾನ್ ತಲಾ ಮೂರು ವಿಕೆಟ್ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಗಾಯಗೊಂಡ ಶಕೀಬ್ ಹಲ್ ಹಸನ್ ಸ್ಥಾನಕ್ಕೆ ಕಳೆದ ವಾರ ಸೌಮ್ಯ ಸರ್ಕಾರ್ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ನಿರ್ಧಾರದಿಂದ ಬಿಸಿಬಿ ಅಧ್ಯಕ್ಷ ಅಸಮಾಧಾನ ಹೊರ ಹಾಕಿದ್ದರು. 2ನೇ ಟೆಸ್ಟ್ಗೆ ಸರ್ಕಾರ್ ಅವರನ್ನು ಆಯ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಕೋಚ್ ಮತ್ತು ನಾಯಕನ ವಿರುದ್ಧ ವಾಗ್ದಾಳಿ ನಡೆಸಿದರು.
ಶಕೀಬ್ ಗಾಯಗೊಂಡಾಗ ತಂಡದ ಮುಂದೆ ನಾಲ್ಕು ಅಥವಾ ಐದು ಆಯ್ಕೆಗಳನ್ನು ಕೊಟ್ಟೆ. ಮೊಹಮ್ಮದುಲ್ಲಾ ರಿಯಾದ್, ಮೊಸದಿಕ್ ಹೊಸೈನ್ ಸೇರಿ ನಾಲ್ಕನೇ ಆಯ್ಕೆಗೆ ಸೌಮ್ಯ ಸರ್ಕಾರ್ ಹೆಸರು ಸೂಚಿಸಿದ್ದೆ. ಆದರೆ, ಕೋಚ್ ಸೌಮ್ಯ ಸರ್ಕಾರ್ಗೆ ಆದ್ಯತೆ ಕೊಟ್ಟರು ಎಂದರು.
ಸರ್ಕಾರ್ ಆಯ್ಕೆಯ ನಿರ್ಧಾರವನ್ನು ನಾಯಕ ಸಮರ್ಥಿಸಿಕೊಂಡಿದ್ದ ನಾಯಕ ಹಕ್, ಶಕೀಬ್ ಅವರ ಅನುಪಸ್ಥಿತಿ ನಮಗೆ ಸವಾಲು ಎಸೆದಿದೆ. ಮಧ್ಯಮ ವೇಗದಲ್ಲಿ ಬೌಲ್ ಮಾಡುವ ಅಲ್ರೌಂಡರ್ ಅಗತ್ಯ. ಸರ್ಕಾರ್ ಒಬ್ಬ ಅನುಭವಿ ಆಟಗಾರ. ಹೀಗಾಗಿ ಆಯ್ಕೆ ಮಾಡಲಾಗಿತ್ತು ಎಂದಿದ್ದರು.
ಹಕ್ ಮತ್ತು ಡೊಮಿಂಗೊ ಅವರು ಒಂದೇ ಆಯ್ಕೆ (ಸರ್ಕಾರ್) ಇದೆ ಎಂದು ಹೇಳಿದ್ದರು. ಅಲ್ಲದೇ, ಬೇರೆ ಯಾವುದೇ ಹೆಸರುಗಳನ್ನು ಸೂಚಿಸಿರಲಿಲ್ಲ. ನಾವು ಮೊದಲಿಗೆ ಆದ್ಯತೆ ಕೊಟ್ಟ ಹೆಸರುಗಳನ್ನು ಬದಿಗಿಟ್ಟು ತಮಗಿಚ್ಚೆ ಬಂದಂತೆ ಆಯ್ಕೆ ಮಾಡಿರುವುದು ಎಷ್ಟು ಸರಿ ಎಂದು ಬಿಸಿಬಿ ಮುಖ್ಯಸ್ಥ ಹಸನ್ ಕಿಡಿಕಾರಿದರು.
ಎರಡನೇ ಟೆಸ್ಟ್ನಲ್ಲಿ 231 ರನ್ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶವು 17 ರನ್ಗಳ ಅಂತರದಿಂದ ಸೋಲನುಭವಿಸಿತು. ಸೌಮ್ಯ ಸರ್ಕಾರ್ ಮೊದಲ ಇನ್ನಿಂಗ್ಸ್ನಲ್ಲಿ ಸೊನ್ನೆ ಸುತ್ತಿದ್ದರೆ, ಎರಡನೇ ಇನ್ನಿಂಗ್ಸ್ನಲ್ಲಿ 13 ರನ್ ಗಳಿಸಿ ವಿಫಲ ಕಂಡರು. ಮೊದಲ ಇನ್ನಿಂಗ್ಸ್ನಲ್ಲಿ ಒಂದು ವಿಕೆಟ್ ಮಾತ್ರ ಪಡೆದುಕೊಂಡಿದ್ದರು.