ಲಾಹೋರ್(ಪಾಕಿಸ್ತಾನ):24 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಒಪ್ಪಿಕೊಂಡಿದೆ. ಈ ತಂಡ 1998ರಲ್ಲಿ ಕೊನೆಯದಾಗಿ ಪಾಕ್ ಪ್ರವಾಸ ಕೈಗೊಂಡಿತ್ತು.
ಆಸ್ಟ್ರೇಲಿಯಾ, 2022ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಕರಾಚಿ (ಮಾರ್ಚ್ 3-7), ರಾವಲ್ಪಿಂಡಿ (ಮಾರ್ಚ್ 12-16) ಮತ್ತು ಲಾಹೋರ್ (ಮಾರ್ಚ್ 21-25) ನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಮಾರ್ಚ್ 29ರಿಂದ ಏಪ್ರಿಲ್ 5 ರವರೆಗೆ ನಡೆಯಲಿರುವ ನಾಲ್ಕು ವೈಟ್‌ಬಾಲ್ ಪಂದ್ಯಗಳಿಗೆ ಲಾಹೋರ್ ವೇದಿಕೆಯಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸೋಮವಾರ ಪ್ರಕಟಿಸಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭದ್ರತೆಯ ಕಾರಣ ನೀಡಿ ಯಾವುದೇ ಪಂದ್ಯವನ್ನಾಡದೆ ತವರಿಗೆ ವಾಪಸ್ ಆಗಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಇಂಗ್ಲೆಂಡ್ ಕೂಡ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಪಾಕ್‌ಗೆ ಪ್ರವಾಸ ಮಾಡುವುದಿಲ್ಲ ಎಂದು ಘೋಷಿಸಿತ್ತು. ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಆಂಗ್ಲನ್ನರ ನಿರ್ಧಾರ ಭಾರಿ ಹಿನ್ನಡೆ ಉಂಟುಮಾಡಿತ್ತು. ಇದೀಗ ಉತ್ತಮ ಗುಣಮಟ್ಟದ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ತಮ್ಮ ದೇಶಕ್ಕೆ ತರುವಲ್ಲಿ ಪಿಸಿಬಿಯ ಪ್ರಯತ್ನಗಳು ಮುಂದುವರಿಯುತ್ತಿವೆ.
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸರಣಿಯಿಂದ ಹಿಂದೆ ಸರಿದ ನಂತರ ಆಸೀಸ್ ಪಾಕಿಸ್ತಾನಕ್ಕೆ ಬರುತ್ತಿರುವುದು ದೇಶಕ್ಕೆ ದೊಡ್ಡ ಗೆಲುವೆಂದೇ ಇತ್ತೀಚೆಗೆ ನೇಮಕವಾಗಿದ್ದ ಪಿಸಿಬಿ ಮುಖ್ಯಸ್ಥ ರಮಿಜ್ ರಾಜಾ ಹೇಳಿದ್ದಾರೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯೊಂದಿಗೆ ಇಲ್ಲಿಗೆ ಮುಗಿಯುವುದಿಲ್ಲ ಎಂದೂ ರಾಜಾ ಹೇಳಿದ್ದು, ಇನ್ನೂ ಹಲವು ಸರಣಿಗಳ ಮೂಲಕ ಇತರೆ ದೇಶಗಳನ್ನು ಪಾಕ್‌ಗೆ ಆಹ್ವಾನಿಸುವ ಮುನ್ಸೂಚನೆ ನೀಡಿದ್ದಾರೆ.
'ಪಾಕ್‌ನ ಗೌರವ, ಪ್ರೀತಿ, ಆತಿಥ್ಯ ಆನಂದಿಸಲು ಉತ್ತಮ ಅವಕಾಶ'
ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡುವ ತಂಡಗಳಲ್ಲಿ ಒಂದಾಗಿದೆ. ಅವರು 24 ವರ್ಷಗಳ ಸುದೀರ್ಘ ಅಂತರದ ನಂತರ ಮೊದಲ ಬಾರಿಗೆ ನಮ್ಮ ನೆಲದಲ್ಲಿ ಆಡುತ್ತಿರುವುದು ಅಭಿಮಾನಿಗಳಿಗೆ ವಿಶೇಷ ಸತ್ಕಾರವಾಗಲಿದೆ. ಅಂತೆಯೇ ಆಸ್ಟ್ರೇಲಿಯಾದ ಕ್ರಿಕೆಟಿಗರು ನಮ್ಮ ಐಕಾನಿಕ್ ಸ್ಥಳಗಳಲ್ಲಿ ಆಡಲು ಮಾತ್ರವಲ್ಲದೆ ಈ ಮಹಾನ್ ದೇಶವು ನೀಡುವ ಗೌರವ, ಪ್ರೀತಿ ಮತ್ತು ಆತಿಥ್ಯವನ್ನು ಅನುಭವಿಸಲು ಹಾಗೂ ಆನಂದಿಸಲು ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲಿ ಅವರು ತಮ್ಮ ತಂಡಕ್ಕೆ ಪೂಲ್‌ಫ್ರೂಫ್ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪಿಸಿಬಿಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.