ಮುಂಬೈ: ಗಾಯದ ಸಮಸ್ಯೆಯಿಂದ ಬೆತ್ ಮೂನಿ ಅವರು ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ಭಾರತೀಯ ಆಲ್‌ರೌಂಡರ್ ಸ್ನೇಹ್ ರಾಣಾ ಅವರನ್ನು ಗುಜರಾತ್ ಜೈಂಟ್ಸ್ ತಂಡದ ನೂತನ ನಾಯಕಿಯಾಗಿ ಗುರುವಾರ ನೇಮಿಸಲಾಗಿದೆ. ಮಾರ್ಚ್ 4 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಆಸ್ಟ್ರೇಲಿಯಾದ ಮೂನಿ ಗಾಯಗೊಂಡು ಪೆವಲಿಯನ್ ಸೇರಿದ್ದರು.
ಮೂನಿ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯಲು ನಾಲ್ಕರಿಂದ ಆರು ವಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಗುಜರಾತ್ ಜೈಂಟ್ಸ್ ಜೊತೆಗಿನ ಮೊದಲ WPL ಋತುವಿಗಾಗಿ ನಾನು ನಿಜವಾಗಿಯೂ ಎದುರು ನೋಡುತ್ತಿದ್ದೆ. ಆದರೆ, ದುರದೃಷ್ಟವಶಾತ್ ಗಾಯಗಳು ಆಟದ ಭಾಗವಾಗಿದೆ. ಹೀಗಾಗಿ ನಾನು ಉಳಿದ ಪಂದ್ಯಗಳಿಂದ ಹೊರಗುಳಿಯುತ್ತಿದ್ದೇನೆ ಎಂದು ನಿರಾಶೆಗೊಳ್ಳುತ್ತಿದ್ದೇನೆ ಅಂತಾ ಮೂನಿ ಹೇಳಿದರು. ಆದ್ರೂ ಸಹ ನಾನು ತಂಡದ ಪ್ರದರ್ಶನದ ಮೇಲೆ ನಿಗಾವಹಿಸುತ್ತೇನೆ. ಅಷ್ಟೇ ಅಲ್ಲ ನಿತ್ಯ ಅವರನ್ನು ಹುರಿದುಂಬಿಸುವ ಕಾರ್ಯ ಮಾಡುತ್ತೇನೆ ಎಂದು ಮೂನಿ ಹೇಳಿದರು.
ಮೂನಿ ಬದಲಿಗೆ, ಗುಜರಾತ್ ಜೈಂಟ್ಸ್ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಇತ್ತೀಚೆಗೆ ಮುಕ್ತಾಯಗೊಂಡ 2023 ರ ಮಹಿಳಾ ಟಿ 20 ವಿಶ್ವಕಪ್‌ನ ಫೈನಲ್‌ಗೆ ದಕ್ಷಿಣ ಆಫ್ರಿಕಾದ ಆಟದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದರು. ಆತಿಥೇಯ ದಕ್ಷಿಣ ಆಫ್ರಿಕಾ T20 ವಿಶ್ವಕಪ್‌ನ ಫೈನಲ್‌ಗೆ ತಲುಪಿದಾಗ ಆಸ್ಟ್ರೇಲಿಯ ವಿರುದ್ಧ ಸೋತಿದ್ದ ಆರು ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ ವೊಲ್ವಾರ್ಡ್ ಅಗ್ರ ಸ್ಕೋರರ್ ಆಗಿರುವುದು ಗಮನಾರ್ಹ.