ಮೆಲ್ಬೋರ್ನ್:ಭಾರತದಲ್ಲಿ ಅಕ್ಟೋಬರ್ 5 ರಿಂದ ನಡೆಯುವ ಏಕದಿನ ವಿಶ್ವಕಪ್ಗೆ ಆಸ್ಟ್ರೇಲಿಯಾ 15 ಆಟಗಾರರ ತಾತ್ಕಾಲಿಕ ತಂಡವನ್ನು ಪ್ರಕಟಿಸಿದ್ದು, ಗಾಯಗೊಂಡಿರುವ ನಾಯಕ ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ಗೂ ಸ್ಥಾನ ನೀಡಲಾಗಿದೆ. ಇದೇ ಮೊದಲ ಬಾರಿಗೆ ಆಲ್ರೌಂಡರ್ ಸೀನ್ ಅಬಾಟ್ಗೂ ಅವಕಾಶ ಕಲ್ಪಿಸಲಾಗಿದೆ.
ಆ್ಯಶಸ್ ಟೆಸ್ಟ್ ಸರಣಿಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್ ಅವರು ಮಣಿಕಟ್ಟಿನ ಗಾಯಕ್ಕೆ ತುತ್ತಾದರೆ, ಬೌಲರ್ ಮಿಚೆಲ್ ಸ್ಟಾರ್ಕ್ ಮತ್ತು ಡ್ಯಾಶಿಂಗ್ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ತೊಡೆಸಂದು ಮತ್ತು ಪಾದದ ನೋವಿನಿಂದಾಗಿ ಸರಣಿಯಿಂದಲೇ ಹೊರಗುಳಿದಿದ್ದರು.
ವಿಶ್ವಕಪ್ಗೂ ಮೊದಲು ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ಧ ಏಕದಿನ ಸರಣಿ ಆಡಲಿದೆ. ಆದರೆ, ಸರಣಿಯಲ್ಲಿ ಗಾಯಾಳು ಕಮ್ಮಿನ್ಸ್ ಆಡುವುದು ಅನುಮಾನವಾಗಿದೆ. ಸ್ವೀವ್ ಸ್ಮಿತ್, ಮ್ಯಾಕ್ಸ್‌ವೆಲ್, ಸ್ಟಾರ್ಕ್ ಅವರನ್ನು ಸರಣಿಯಿಂದ ಕೈಬಿಟ್ಟು ಚೇತರಿಕೆಗೆ ಅವಕಾಶ ನೀಡಲಾಗಿದೆ.
ಭಾರತ ಸರಣಿ ವೇಳೆಗೆ ಎಲ್ಲರೂ ಫಿಟ್ ಆಗುವ ಸಾಧ್ಯತೆಯಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಗಾಯಾಳುಗಳನ್ನ ಆಡಿಸುತ್ತಿಲ್ಲ. ವಿಶ್ವಕಪ್ಗೆ ಅಂತಿಮ ತಂಡವನ್ನು ಘೋಷಿಸುವ ಮೊದಲು ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ಎಂಟು ಏಕದಿನ ಪಂದ್ಯಗಳು ನಡೆಯಲಿವೆ. ಎರಡೂ ಸರಣಿಗಳು ವಿಶ್ವಕಪ್ಗೆ ಸಿದ್ಧತೆ ನಡೆಸಲು ತಂಡಕ್ಕೆ ಅತ್ಯುತ್ತಮ ಅವಕಾಶ ಒದಗಿಸಿಕೊಡಲಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಹೇಳಿದ್ದಾರೆ.
ಅಬ್ಬಾಟ್ ಇನ್ ಎಲ್ಲಿಸ್ ಔಟ್:31ರ ಹರೆಯದ ಸೀನ್ ಅಬ್ಬಾಟ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಇನ್ನೊಬ್ಬ ವೇಗಿ ನಾಥನ್ ಎಲ್ಲಿಸ್ರನ್ನು ತಂಡದಿಂದ ಹೊರದಬ್ಬಿದ್ದಾರೆ. ಜೊತೆಗೆ ತಂಡದ ಸ್ಥಾನ ನಿರೀಕ್ಷೆ ಹೊಂದಿದ್ದ ಆರನ್ ಹಾರ್ಡಿ ಮತ್ತು ಲೆಗ್ ಸ್ಪಿನ್ನರ್ ತನ್ವೀರ್ ಸಂಘ ಅವರ ಪ್ರಯತ್ನ ವಿಫಲವಾಗಿದೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳು ಪ್ರಮುಖ ಪಾತ್ರ ವಹಿಸುವ ಕಾರಣ ಕ್ರಿಕೆಟ್ ಆಸೀಸ್ ಪ್ರತಿಭಾವಂತ ಆಟಗಾರರಿಗೆ ಮಣೆ ಹಾಕಿದೆ. ಸೀನ್ ಅಬಾಟ್ ಜೊತೆಗೆ ಮಿಚೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್ ಅವರನ್ನು ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಾಗಿ ಆಯ್ಕೆ ಮಾಡಿದೆ. ಆ್ಯಡಂ ಜಂಪಾ ಮತ್ತು ಆಸ್ಟನ್ ಅಗರ್ ಸ್ಪಿನ್ ಸ್ಪೆಷಲಿಸ್ಟ್ಗಳಾಗಿದ್ದಾರೆ. ಜೋಶ್ ಇಂಗ್ಲಿಸ್ ಎರಡನೇ ವಿಕೆಟ್ ಕೀಪರ್ ಆಗಿ ಸೇರಿಕೊಂಡಿದ್ದಾರೆ.
ತಂಡದ ತಾತ್ಕಾಲಿಕ ಪಟ್ಟಿ ಇದಾಗಿದ್ದು, ಇದನ್ನು ಮಾರ್ಪಡಿಸಲು ಸೆಪ್ಟೆಂಬರ್ 28 ರವರೆಗೆ ಅವಕಾಶವಿದೆ. ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ 5 ಪಂದ್ಯಗಳ ಏಕದಿನ ಸರಣಿ ಆರಂಭವಾದರೆ, ಸೆಪ್ಟೆಂಬರ್ 22 ರಿಂದ ಭಾರತ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲು ಭಾರತಕ್ಕೆ ಪ್ರಯಾಣಿಸಲಿದೆ.
ಆಸ್ಟ್ರೇಲಿಯಾ ವಿಶ್ವಕಪ್ ತಂಡ ಹೀಗಿದೆ:ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಸ್ಟ್ನ್ ಅಗರ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರೇವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ (ಪಿಟಿಐ)
ಇದನ್ನೂ ಓದಿ:World Cup 2023: ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟ.. ಕೆಎಲ್ ರಾಹುಲ್ಗೆ ಸ್ಥಾನ