ದಂಬುಲಾ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಕೊನೆಯ ಪಂದ್ಯ ಕೈಚೆಲ್ಲಿರುವ ಭಾರತ ವನಿತೆಯರ ಬಳಗ 2-1 ಅಂತರದಲ್ಲಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ದಂಬುಲಾ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್ಪ್ರೀತ್ ಕೌರ್ ಬಳಗ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 138 ರನ್ಗಳಿಸಿತು. ನಾಯಕಿ ಕೌರ್ ಅಜೇಯ 39ರನ್ಗಳಿಸಿದರೆ, ರೋಡ್ರಿಗಸ್ 33 ಹಾಗೂ ಸ್ಮೃತಿ ಮಂದಾನಾ 22ರನ್ ಪೇರಿಸಿದರು.
ಇದನ್ನೂ ಓದಿ:ಇಂಗ್ಲೆಂಡ್‌ಗೆ ಚೊಚ್ಚಲ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಶೀಘ್ರದಲ್ಲೇ ವಿದಾಯ?
139 ರನ್ಗಳ ಗುರಿ ಬೆನ್ನತ್ತಿದ್ದ ಲಂಕಾ ಆರಂಭದಲ್ಲೇ ಆಘಾತ ಅನುಭವಿಸಿದರೂ ನಾಯಕಿ ಚಾಮರಿ ಅಟಪಟ್ಟು ಅವರ ಅಜೇಯ 80ರನ್ ಹಾಗೂ ಸಿಲ್ವಾ 30 ರನ್ಗಳ ನೆರವಿನಿಂದ 17 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಗೆಲುವು ಸಾಧಿಸಿತು. ಈ ಮೂಲಕ ತವರಿನಲ್ಲೇ ಕ್ಲೀನ್‌ಸ್ವೀಪ್ ಮುಖಭಂಗ ತಪ್ಪಿಸಿಕೊಂಡಿತ್ತು.
ಮೊದಲೆರಡು ಟಿ20 ಪಂದ್ಯಗಳಲ್ಲಿ ಭಾರತ ಗೆಲುವು ಪಡೆದಿದ್ದು ಸರಣಿ ಕೈವಶ ಮಾಡಿಕೊಂಡಿದೆ. ಉತ್ತಮ ಪ್ರದರ್ಶನ ನೀಡಿದ ನಾಯಕಿ ಹರ್ಮನ್ಪ್ರೀತ್ ಕೌರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.