ನವದೆಹಲಿ:ಐಪಿಎಲ್ 15ನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಎಲ್ಲ ತಂಡಗಳ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
ಪ್ರತಿ ಸೀಸನ್ನಲ್ಲಿ ದಾಂಡಿಗರು ಎದುರಾಳಿ ಬೌಲರ್‌ಗಳ ಮೇಲೆ ಪಾರಮ್ಯ ಮೆರೆದು ನಿದ್ದೆಗೆಡಿಸಿದಂತೆ ಈ ಬಾರಿಯೂ ಕೂಡ ತಮ್ಮ ಬ್ಯಾಟ್ನ ಕರಾಮತ್ತು ತೋರಿಸಲು ಹವಣಿಸುತ್ತಿದ್ದಾರೆ. ಈ ಹಿಂದಿನ ಸೀಸನ್ಗಳಲ್ಲಿ ಕೆಲ ದಾಂಡಿಗರು ಎದುರಾಳಿ ತಂಡದ ಮೇಲೆ ದಂಡೆತ್ತಿ ಹೋಗಿ ಬೃಹತ್ ಇನಿಂಗ್ಸ್ ಕಟ್ಟಿದ್ದಾರೆ. ವೈಯಕ್ತಿಕ ಅತ್ಯಧಿಕ ರನ್ ಬಾರಿಸಿದ ಅಗ್ರ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಹೀಗಿದೆ.
ಕ್ರಿಸ್ ಗೇಲ್ (175)
ಚುಟುಕು ಕ್ರಿಕೆಟ್ನಲ್ಲಿ ಕ್ರಿಸ್ಗೇಲ್ ಹೆಸರೇ ಸಾಕು ಬೌಲರ್ಗಳು ಬೆವರಲು. ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ವಿಧ್ವಂಸಕ ಆರಂಭಿಕ ಆಟಗಾರ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. 2013ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರ ಆಡಿದ್ದ ಗೇಲ್ ಪುಣೆ ವಿರುದ್ಧದ ಪಂದ್ಯದಲ್ಲಿ 175 ರನ್ ಚಚ್ಚಿದ್ದರು. ಆ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಗಳಿಸಿದ್ದರು. ಗೇಲ್ ಸಿಡಿಲಬ್ಬರದ ಬ್ಯಾಟ್ನಿಂದ 13 ಬೌಂಡರಿ ಬಂದರೆ, 17 ಸಿಕ್ಸರ್‌ಗಳು ಆಕಾಶದೆತ್ತರಕ್ಕೆ ಹಾರಿದ್ದವು. ಆರ್‌ಸಿಬಿ ಈ ಪಂದ್ಯವನ್ನು 130 ರನ್‌ಗಳಿಂದ ಜಯಿಸಿತ್ತು.
ಬ್ರೆಂಡನ್ ಮೆಕಲಮ್(158)
ನ್ಯೂಜಿಲ್ಯಾಂಡ್ ಆಟಗಾರ ಬ್ರೆಂಡನ್ ಮೆಕಲಮ್ ಸಾಧನೆಯನ್ನು 'ಐಪಿಎಲ್ ಕ್ರಿಕೆಟ್' ಎಂದಿಗೂ ಮರೆಯಲಾಗದು. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹೊರಗಡೆ ಪಟಾಕಿ ಸಿಡಿದರೆ, ಮೈದಾನದಲ್ಲಿ ಮೆಕಲಮ್ ರನ್ ಪಟಾಕಿ ಸಿಡಿಸಿದ್ದರು. ಟೂರ್ನಿಯ ಮೊದಲ ಋತುವಿನ, ಮೊದಲ ಪಂದ್ಯದಲ್ಲೇ ಅವರು ಚುಟುಕು ಕ್ರಿಕೆಟ್ ಅನ್ನು 'ಹೀಗೇ ಆಡಬೇಕು' ಎಂದು ತೋರಿಸಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಮೆಕಲಮ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೇವಲ 73 ಎಸೆತಗಳಲ್ಲಿ 158 ರನ್ ಗಳಿಸಿದ್ದರು. ಇದರಲ್ಲಿ 10 ಬೌಂಡರಿ ಹಾಗೂ 13 ಸಿಕ್ಸರ್‌ಗಳು ಅವರ ಬ್ಯಾಟ್ನಿಂದ ಸಿಡಿದಿದ್ದವು. ಮೆಕಲಮ್ರ ಮಿಂಚಿನ ಆಟದಿಂದ ಕೋಲ್ಕತ್ತಾ 140 ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.