ದುಬೈ: ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡವನ್ನು ಜಯದತ್ತ ಕೊಂಡೊಯ್ದು ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದ ಬಳಿಕ ಮಹೇಂದ್ರ ಸಿಂಗ್ ಧೋನಿ ಇದೀಗ ಭಾರತ ತಂಡದ ಮೆಂಟರ್ ಆಗಿ ದುಬೈನಲ್ಲಿದ್ದಾರೆ.
ಐಪಿಎಲ್ ಮುಗಿದು ಎರಡು ದಿನದ ಬಳಿಕ ದುಬೈನಲ್ಲಿ ಬೀಡುಬಿಟ್ಟಿರುವ ಭಾರತ ತಂಡವನ್ನು ಅವರು ಭಾನುವಾರ ಸೇರಿಕೊಂಡರು. ಕಳೆದ ತಿಂಗಳು ಧೋನಿ ಭಾರತ ಕ್ರಿಕೆಟ್ ತಂಡದ ಮೆಂಟರ್ ಆಗಿ ನೇಮಕವಾಗಿದ್ದರು.
ಧೋನಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಟ್ವೀಟ್ ಮಾಡಿರುವ ಬಿಸಿಸಿಐ, ಕಿಂಗ್ ಎಂ.ಎಸ್.ಧೋನಿಗೆ ಆತ್ಮೀಯ ಸ್ವಾಗತ. ಟೀಂ ಇಂಡಿಯಾದ ಹೊಸ ಪಾತ್ರಕ್ಕೆ ಮರಳಿದ್ದಾರೆ ಎಂದಿದೆ. ಈ ಫೋಟೋದಲ್ಲಿ ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಸೇರಿದಂತೆ ಇತರರು ಕಂಡುಬರುತ್ತಾರೆ.
ಕ್ಯಾಪ್ಟನ್ ಕೂಲ್ ಸಾಧನೆ:
ಧೋನಿ ಐಸಿಸಿ ಕ್ರಿಕೆಟ್ನ ಮೂರು ಮಾದರಿಯ ಟೂರ್ನಿಗಳಲ್ಲಿ ಕಪ್ ಗೆದ್ದಿದ್ದಾರೆ. 2007ರ ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದಲ್ಲದೆ, 2010, 2011, 2018 ಮತ್ತು 2021ರ ಐಪಿಎಲ್ ಪ್ರಶಸ್ತಿ ಗೆದ್ದು, ಯಶಸ್ವಿ ನಾಯಕ ಎನಿಸಿದ್ದಾರೆ.
ಐಸಿಸಿ ಟಿ20 ಟ್ರೋಫಿಯಲ್ಲಿ ಭಾರತ ತಂಡ ಲೀಗ್ ಹಂತದ ಪಂದ್ಯಕ್ಕೂ ಮೊದಲು 2 ಅಭ್ಯಾಸ ಪಂದ್ಯವಾಡಲಿದೆ. ಇಂದು ಇಂಗ್ಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ ನಡೆಯಲಿದ್ದು, ಬಳಿಕ ಬುಧವಾರ ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಪಂದ್ಯವಾಡಲಿದೆ. ಇದಾದ ಬಳಿಕ ಪಾಕಿಸ್ತಾನದ ವಿರುದ್ಧ ಅ.24ರಂದು ಟೂರ್ನಿಯ ಮೊದಲ ಪಂದ್ಯಕ್ಕೆ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಅಚ್ಚರಿ ರೀತಿಯಲ್ಲಿ ಬಾಂಗ್ಲಾ ಹುಲಿಗಳಿಗೆ ಸೋಲುಣಿಸಿದ ಸ್ಕಾಟ್ಲೆಂಡ್