ಕೋಲ್ಕತ್ತಾ: ಅಡಿಲೇಡ್ ಓವಲ್‌ನಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಲು ಕೆಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಕಳಪೆ ಬ್ಯಾಟಿಂಗ್, ಕಳಪೆ ಬೌಲಿಂಗ್ ಮತ್ತು ಕಳಪೆ ಫೀಲ್ಡಿಂಗ್ ಅಷ್ಟೇ ಅಲ್ಲ. ಟೂರ್ನಿಯ ಆರಂಭಕ್ಕೂ ಮುನ್ನವೇ ತಂಡದಲ್ಲಿದ್ದ ಲೋಪದೋಷಗಳು ಸೋಲಿಗೆ ಮೂಲ ಕಾರಣ ಎನ್ನಲಾಗುತ್ತಿದೆ. ಅದನ್ನು ತಿದ್ದಿಕೊಳ್ಳದ ಟೀಂ ಇಂಡಿಯಾ ಹಗುರವಾಗಿ ಪರಿಗಣಿಸಿದ್ದರಿಂದ ಹೀನಾಯ ಸೋಲನುಭವಿಸಬೇಕಾಯಿತು.
ಟಿ20 ವಿಶ್ವಕಪ್ ಅನ್ನು ಗೆಲ್ಲಲೇಬೇಕು ಎಂಬ ಅತ್ಯುತ್ಸಾಹದಿಂದ ಯುವ ದಂಡು ಕಟ್ಟಿಕೊಂಡು ಆಸ್ಟೇಲಿಯಾಕ್ಕೆ ಹೋದ ರೋಹಿತ್ ಶರ್ಮಾ, ಅವರನ್ನು ಬೆಂಚ್ನಲ್ಲಿ ಕಾಯ್ದಿರಿಸಿದ್ದು ಸೋಲಿನ ಮೊದಲ ಅಧ್ಯಾಯ. ಫಾರ್ಮ್ನಲ್ಲಿದ್ದವರನ್ನು ಬಿಟ್ಟು ಪರೀಕ್ಷಾರ್ಥವಾಗಿ ಕೆಲವರನ್ನು ಕಣಕ್ಕಿಳಿಸಿದ್ದು ಈ ಪಟ್ಟಿಯಲ್ಲಿ ಬರುವ ಮಗದೊಂದು ತಪ್ಪು ನಿರ್ಧಾರ.
ತಂಡ ಪ್ರಕಟಿಸಿದಾಗ ಆರಂಭದಲ್ಲಿ ವೇಗಿ ಮೊಹಮ್ಮದ್ ಶಮಿ ಇರಲಿಲ್ಲ. ಟೀಂ ಇಂಡಿಯಾದ ಯಾರ್ಕರ್ ಜಸ್ಪ್ರೀತ್ ಬುಮ್ರಾ ಅವರ ಜಾಗ ತುಂಬಲು ಮೊಹಮ್ಮದ್ ಶಮಿ ಅವರನ್ನು ಕೊನೆಯ ಕ್ಷಣದಲ್ಲಿ ಮೈದಾನಕ್ಕೆ ಕರೆ ತರಲಾಯಿತು. ಇದರಿಂದ ಭಾರಿ ಹಾನಿ ಆಗದಿದ್ದರೂ ಆ ಪರಿಸ್ಥಿತಿಗೆ ಅವರು ಅನಿವಾರ್ಯ ಅನ್ನಿಸಿದ್ದರು. ಹಾಗಾಗಿ ತುರ್ತು ಪರಿಸ್ಥಿತಿಯಲ್ಲಿಯೂ ಶಮಿ ಅವರನ್ನು ಬಳಸಿಕೊಳ್ಳಲು ಒಂದು ತಂತ್ರ ರೂಪಿಸಿದ ಹೊರತಾಗಿಯೂ ಫಲಿ ನೀಡದಿರುವುದು ವಿಪರ್ಯಾಸ.
ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಅವರು ಆಡುವ ಅಗ್ರ ಕ್ರಮಾಂಕದಲ್ಲಿಯೇ ಕಾಣಿಸದೇ ಇರುವುದು. ಈ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಮಾತ್ರವಲ್ಲದೇ, ಈ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಉತ್ತಮ ಆರಂಭಕ್ಕೆ ಒದಗಿಸಲೂ ಹೆಣಗಾಡಿದರು. ವಿರಾಟ್ ಕೊಹ್ಲಿ ಇದ್ದಾರಲ್ಲ ಎಂಬ ನಂಬಿಕೆ ಇಟ್ಟುಕೊಂಡು ಪದೇ ಪದೇ ತಮ್ಮ ಆಟದ ವೈಖರಿಯನ್ನು ಮರೆತಿದ್ದು ಗಮನಿಸಿರಬಹುದು.
ಟಿ20 ವಿಶ್ವಕಪ್‌ನಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಕೊಹ್ಲಿ ಮತ್ತು ಸೂರ್ಯಕುಮಾರ್, ಒಂದೆರಡು ಪಂದ್ಯ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲೂ ತಂಡಕ್ಕೆ ತಮ್ಮ ಕೊಡುಗೆ ನೀಡಿದರು. ಈ ಇಬ್ಬರು ಆಡಿರದಿದ್ದರೆ ಭಾರತ ಸೆಮಿಫೈನಲ್ ತಲುಪುವುದೂ ಕಷ್ಟವೆನಿಸಿತ್ತು.