ಬ್ರಿಸ್ಟೋಲ್: ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದ ತಯಾರಿಗೆ ಭಾರತ ವನಿತೆಯರ ಬಳಗ ಪುರುಷ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮೊರೆ ಹೋಗಿದ್ದಾರೆ. 6 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ಗೆ ಮರಳುತ್ತಿರುವ ಮಿಥಾಲಿ ಬಳಗ ರಹಾನೆ ಮಾರ್ಗದರ್ಶನದಲ್ಲಿ ಬ್ಯಾಟಿಂಗ್ ತರಬೇತಿ ನಡೆಸಿದೆ ಎಂದು ತಿಳಿದುಬಂದಿದೆ.
ಜೂನ್ 2 ರಂದು ಭಾರತ ಪುರುಷರ ತಂಡದ ಜೊತೆಯಲ್ಲೇ ಮಹಿಳಾ ತಂಡ ಕೂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಕೊಹ್ಲಿ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಆಂಗ್ಲರ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಿದರೆ, ಮಹಿಳಾ ತಂಡ ಏಕೈಕ ಟೆಸ್ಟ್ ಪಂದ್ಯ ಮತ್ತು ತಲಾ 3 ಏಕದಿನ ಮತ್ತು ಟಿ-20 ಪಂದ್ಯಗಳನ್ನಾಡಲಿದೆ. ಜೂನ್ 16ರಿಂದ ಟೆಸ್ಟ್ ಪಂದ್ಯ ಶುರುವಾಗಲಿದ್ದು ರಹಾನೆ ಜೊತೆಗೆ ಚರ್ಚಿಸಲಿದ್ದೇವೆ ಎಂದು ಹರ್ಮನ್ ಪ್ರೀತ್ ಕೌರ್ ಹೇಳಿದ್ದಾರೆ.
ತಂಡದಲ್ಲಿರುವ ಯುವ ಆಟಗಾರ್ತಿಯರಂತೆ ನಾವು ಕೂಡ ಹೆಚ್ಚು ರೆಡ್ - ಬಾಲ್ ಕ್ರಿಕೆಟ್ ಆಡಿಲ್ಲ. ಈ ಹಿಂದೆ ನಾವು ಕೇವಲ ಎರಡು ಪಂದ್ಯಗಳನ್ನಷ್ಟೆ ಆಡಿದ್ದೇವೆ. ಇಂಗ್ಲೆಂಡ್ ಟೆಸ್ಟ್ಗೂ ಮುನ್ನ ರಹಾನೆ ಅವರೊಂದಿಗೆ ಮಾತನಾಡಲು ನಮಗೆ ಅವಕಾಶ ಸಿಕ್ಕಿದೆ.
ಏಕೆಂದರೆ ಅವರಿಗೆ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ಸಾಕಷ್ಟು ಅನುಭವವಿದೆ. ಇಲ್ಲಿ ನಾವು ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದರ ಕುರಿತು ಅವರು ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡರು. ಜೊತೆಗೆ ನಾವು ಯಾವ ರೀತಿಯ ವಿಧಾನವನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ " ಎಂದು ಭಾರತ ಮಹಿಳಾ ತಂಡದ ಉಪನಾಯಕಿ ಕೌರ್ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುವ ವೇಳೆ ಹೇಳಿದ್ದಾರೆ.
ಅಲ್ಲದೆ, ನಾವು ಹೆಚ್ಚು ಅಭ್ಯಾಸ ಕೂಡ ಮಾಡಿಲ್ಲ, ಆದರೆ ಮಾನಸಿಕವಾಗಿ ನಾವು ಪಂದ್ಯಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೇವೆ. ನಾವು ನೆಟ್ಸ್ನಲ್ಲೂ ಹೆಚ್ಚು ಸಮಯ ಅತ್ಯುತ್ತಮವಾಗಿ ಕಳೆಯಲು ಬಯಸಿದ್ದೆವು, ಏಕೆಂದರೆ ನೀವು ಅಲ್ಲಿ ಮಾನಸಿಕವಾಗಿ ಉತ್ತಮವಾಗಿದ್ದರೆ, ಬ್ಯಾಟಿಂಗ್ ಬಗ್ಗೆ ಚಿಂತಿಸುವುದು ಕಡಿಮೆಯಾಗುತ್ತದೆ. ನಮ್ಮ ಬಲವನ್ನರಿತು ಉತ್ತಮ ಕ್ರಿಕೆಟ್ ಆಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬ್ರಿಸ್ಟೋಲ್ ಕೌಂಟಿ ಗ್ರೌಂಡ್ನಲ್ಲಿ ಜೂನ್ 16 ರಿಂದ 19ರವರೆಗೆ ಟೆಸ್ಟ್ ಪಂದ್ಯ ನಡೆಯಲಿದೆ. 2014ರಲ್ಲಿ ಭಾರತ ವನಿತೆಯರ ತಂಡ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಮೈಸೂರಿನಲ್ಲಿ ಆಡಿತ್ತು. ಇದೀಗ 7 ವರ್ಷಗಳ ನಂತರ ಮತ್ತೆ ದೀರ್ಘ ಮಾದರಿಯ ಕ್ರಿಕೆಟ್ಗೆ ಮರಳುತ್ತಿದೆ.
ಇದನ್ನು ಓದಿ:ಇಂಗ್ಲೆಂಡ್ನಲ್ಲಿ ಪಿಚ್ಗೆ ಹೊಂದಿಕೊಂಡರೆ ರನ್ ಗಳಿಕೆ ಕಷ್ಟವೇನಲ್ಲ: ರಹಾನೆ