ಲಖನೌ (ಉತ್ತರ ಪ್ರದೇಶ): ಅಕ್ಟೋಬರ್ 23 ರಂದು ನಿಧನರಾದ ಲೆಜೆಂಡರಿ ಸ್ಪಿನ್ನರ್ ಮತ್ತು ಭಾರತದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ಅವರ ಸ್ಮರಣಾರ್ಥ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾನುವಾರ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ತೋಳಿನಲ್ಲಿ ಕಪ್ಪು ಪಟ್ಟಿ ಧರಿಸಿ ಆಡುತ್ತಿದ್ದಾರೆ.
2023 ರ ಅಕ್ಟೋಬರ್ 23 ರಂದು ನಿಧನರಾದ ದಂತಕಥೆ ಬಿಷನ್ ಸಿಂಗ್ ಬೇಡಿ ಅವರ ಸ್ಮರಣಾರ್ಥ ಟೀಮ್ ಇಂಡಿಯಾ ಇಂದು ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತೋಳಿಗೆ ಕಪ್ಪುಪಟ್ಟಿ ಧರಿಸಿ ಆಡುತ್ತಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಲೆಜೆಂಡರಿ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ (77) ಅವರು ಸೋಮವಾರ ನಿಧನರಾಗಿದ್ದಾರೆ. ಇವರು ಪತ್ನಿ ಅಂಜು, ಮಗ ಅಂಗದ್ ಮತ್ತು ಸೊಸೆ ನೇಹಾ ಅವರನ್ನು ಅಗಲಿದ್ದಾರೆ.
1946ರಲ್ಲಿ ಅಮೃತಸರದಲ್ಲಿ ಜನಿಸಿದ್ದ ಬಿಶನ್ ಸಿಂಗ್ ಬೇಡಿ, ಭಾರತ ಕ್ರಿಕೆಟ್ ತಂಡದಲ್ಲಿ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಟೆಸ್ಟ್‌ನಲ್ಲಿ 14 ಬಾರಿ ಐದು ವಿಕೆಟ್ ಪಡೆದ ವಿಶೇಷ ಸಾಧನೆ ಬೇಡಿ ಹೆಸರಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 266 ವಿಕೆಟ್ಗಳನ್ನು ಪಡೆದಿದ್ದರು. ಬೇಡಿ ಅವರು ಎರಪಳ್ಳಿ ಪ್ರಸನ್ನ, ಭಾಗವತ್ ಚಂದ್ರಶೇಖರ್ ಮತ್ತು ಶ್ರೀನಿವಾಸ್ ವೆಂಕಟರಾಘವನ್ ಅವರೊಂದಿಗೆ ಭಾರತೀಯ ಕ್ರಿಕೆಟ್‌ನ ಸುವರ್ಣ ಕಾಲಘಟ್ಟದಲ್ಲಿ ತ್ರಿವಳಿ ಸ್ಪಿನ್ ಜೋಡಿಯಾಗಿದ್ದರು. 1966 ಮತ್ತು 1978ರ ನಡುವೆ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಬೌಲಿಂಗ್ ವಿಭಾಗದಲ್ಲಿ ಪ್ರಭಾವಿ ಆಟಗಾರರಾಗಿದ್ದರು.
ಬೇಡಿ ಅವರಿಗೆ 1970ರಲ್ಲಿ ಭಾರತ ಸರ್ಕಾರ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಸಿದ್ಧ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಗೌರವಾರ್ಥವಾಗಿ ಒಂದು ಸ್ಟ್ಯಾಂಡ್ಗೆ ಅವರ ಹೆಸರನ್ನಿಟ್ಟಿದೆ. 1990ರಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಸಮಯದಲ್ಲಿ ಬೇಡಿ ಭಾರತೀಯ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿದ್ದರು. ಮಣಿಂದರ್ ಸಿಂಗ್ ಮತ್ತು ಮುರಳಿ ಕಾರ್ತಿಕ್ ಅವರಂತಹ ಅನೇಕ ಪ್ರತಿಭಾವಂತ ಆಟಗಾರರಿಗೆ ಮಾರ್ಗದರ್ಶಕರೂ ಆಗಿದ್ದರು.
ಇದನ್ನೂ ಓದಿ:ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ನಿಧನ