ಬೆಂಗಳೂರು: ಕರ್ನಾಟಕದ ಅನುಭವಿ ಆಟಗಾರ ಪ್ರಕಾಶ್ ಜಯರಾಮಯ್ಯ, ಸುನೀಲ್ ರಮೇಶ್, ಲೋಕೇಶ್ ಹಾಗೂ ಬಸಪ್ಪ ವಡ್ಡಾಗೊಲ್, ಮಾರ್ಚ್ 13 ರಿಂದ 19 ರವರೆಗೆ ಶಾರ್ಜಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ತ್ರಿಕೋನ ಸರಣಿ ಯುಎಇಯಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ 6 ಪಂದ್ಯಗಳು ಹಾಗೂ ಮಾರ್ಚ್ 19 ರಂದು ಫೈನಲ್ ಪಂದ್ಯ ನಡೆಯಲಿದೆ. ಶಾರ್ಜಾದ ಸ್ಜೈಲೈನ್ ಯುನಿವರ್ಸಿಟಿ ಕಾಂಪಸ್ನಲ್ಲಿ ಟೂರ್ನಿ ಆಯೋಜನೆಯಾಗಿದೆ.
ಟೂರ್ನಿಯ ಪೂರ್ವಭಾವಿಯಾಗಿ ಮಾರ್ಚ್ 1 ರಿಂದ 11 ರವರೆಗೆ ಬೆಂಗಳೂರಿನಲ್ಲಿ ತರಬೇತಿ ಶಿಬಿರ ನಡೆಯಲಿದೆ ಎಂದು ಅಂಧರ ಕ್ರಿಕೆಟ್ ಆಯ್ಕೆ ಸಮಿತಿಯ ಸದಸ್ಯರು ಮಾಹಿತಿ ನೀಡಿದ್ದಾರೆ. ತಂಡದಲ್ಲಿರುವ 11 ಆಟಗಾರರಲ್ಲಿ ಸಂಪೂರ್ಣವಾಗಿ ಕುರುಡರಾಗಿರುವ ನಾಲ್ಕು ಆಟಗಾರರು (B1), ಭಾಗಶಃ ಕುರುಡು ಆಟಗಾರರು ಮೂವರು (B2), ಮತ್ತು ದೃಷ್ಟಿ ದೋಷ ಹೊಂದಿರುವ 4(B3) ಆಟಗಾರರಿರುತ್ತಾರೆ.