ಮುಂಬೈ: ಭಾರತ ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಬಿಸಿಸಿಐ ಆಯೋಜಿಸುವ ಮಹಿಳಾ ಟಿ20 ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಲೀಗ್ನಲ್ಲಿ ಆಡಿರುವ 6 ಪಂದ್ಯಗಳಲ್ಲಿ 5 ರಲ್ಲಿ ಅರ್ಧಶತಕ ಸಿಡಿಸಿ ತಂಡವನ್ನು ಕ್ವಾರ್ಟರ್ ಫೈನಲ್ ಪ್ರವೇಶಿಸಲು ನೆರವಾಗಿದ್ದಾರೆ. ಹಿರಿಯ ಮಹಿಳಾ ಟಿ20 ಲೀಗ್ನಲ್ಲಿ ಹರಿಯಾಣ ತಂಡವನ್ನು ಮುನ್ನಡೆಸುತ್ತಿರುವ ಶೆಫಾಲಿ ವರ್ಮಾ 6 ಪಂದ್ಯಗಳಿಂದ 301 ರನ್ಗಳಿಸಿ ಅಬ್ಬರಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ.
ಶೆಫಾಲಿ ಪಂಜಾಬ್ ವಿರುದ್ಧದ ಮೊದಲ ಪಂದ್ಯದಲ್ಲಿ 23 ಎಸೆತಗಳಲ್ಲಿ 50 ರನ್ ಚಚ್ಚಿದ್ದರು. ಸೌರಾಷ್ಟ್ರ ವಿರುದ್ಧ 29 ಎಸೆತಗಳಲ್ಲಿ 51, ಬೆಂಗಾಲ್ ವಿರುದ್ಧ 46 ಎಸೆತಗಳಲ್ಲಿ ಅಜೇಯ 75, ಅಸ್ಸಾಂ ವಿರುದ್ಧ 29 ಎಸೆತಗಳಲ್ಲಿ 58, ಜಾರ್ಖಂಡ್ ವಿರುದ್ಧ 33 ಎಸೆತಗಳಲ್ಲಿ ಅಜೇಯ 65 ರನ್ಗಳಿಸಿದ್ದಾರೆ. ಆಡಿರುವ 6 ಪಂದ್ಯಗಳಲ್ಲಿ ಮುಂಬೈ ವಿರುದ್ಧ ಮಾತ್ರ ಕೇವಲ 2 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಮಾತ್ರ ಹರಿಯಾಣ ಸೋಲು ಕಂಡಿದೆ.