2023ರ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇಂದು ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಲಿದೆ. ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ಉದ್ಘಾಟನಾ ಪಂದ್ಯಕ್ಕೂ ಮುನ್ನ ಮನರಂಜನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದರ ತಯಾರಿ ಈಗಾಗಲೇ ಭರ್ಜರಿಯಾಗಿ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ.
ಐಪಿಎಲ್ ಆರಂಭಕ್ಕೂ ಮುನ್ನ ನಿನ್ನೆ (ಗುರುವಾರ) 10 ತಂಡಗಳ ನಾಯಕರ ಫೊಟೋ ಶೂಟ್ ಆಯೋಜಿಸಲಾಗಿತ್ತು. ಆದರೆ, ಈ ಫೋಟೋ ಶೋಟ್ಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗೈರಾಗಿದ್ದರು. ಇದಕ್ಕೆ ಕಾರಣ ಏನು ಎಂದು ಐಪಿಎಲ್ ಆಯೋಜಕರಾಗಲಿ, ಬಿಸಿಸಿಐ ಆಗಲಿ ಅಥವಾ ಮುಂಬೈ ಇಂಡಿಯನ್ಸ್ ಪ್ರಾಂಚೈಸಿಯಾಗಲಿ ಹೇಳಿಲ್ಲ. ಈ ಬಗ್ಗೆ ಟ್ವಿಟರ್ನಲ್ಲಿ ಹಲವಾರು ಟ್ರೋಲ್ಗಳು ಹರಿದಾಡುತ್ತಿವೆ.
ಐಪಿಎಲ್ ಕಪ್ ಹಿಂದೆ 9 ತಂಡಗಳ ನಾಯಕರು ನಿಂತಿರುವ ಫೋಟೋವನ್ನು ಐಪಿಎಲ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ರೋಹಿತ್ ಶರ್ಮಾ ಇಲ್ಲದಿರುವುದು ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸನ್ ರೈಸರ್ಸ್ ಹೈದರಾಬಾದ್ನ ಅಧಿಕೃತ ನಾಯಕ ಏಡನ್ ಮಾರ್ಕ್ರಮ್ ಅಂತಾರಾಷ್ಟ್ರೀಯ ಪಂದ್ಯದ ಭಾಗವಾಗಿರುವ ಕಾರಣ ಇನ್ನು ತಂಡವನ್ನು ಸೇರಿಕೊಳ್ಳದ ಹಿನ್ನೆಲೆಯಲ್ಲಿ ಭುವನೇಶ್ವರ್ ಕುಮಾರ್ ಎಸ್ಆರ್ಹೆಚ್ನ್ನು ಪ್ರತಿನಿಧಿಸಿದ್ದರು.
ಉಳಿದಂತೆ ರಿಷಬ್ ಪಂತ್ ಬದಲಿ ಘೋಷಣೆ ಆಗಿರುವ ಡೆಲ್ಲಿ ನಾಯಕ ಡೇವಿಡ್ ವಾರ್ನರ್, ರಾಜಸ್ಥಾನ ರಾಯಲ್ಸ್ನ ಸಂಜು ಸ್ಯಾಮ್ಸನ್, ಗುಜರಾತ್ ಟೈಟಾನ್ಸ್ನ ಹಾರ್ದಿಕ್ ಪಾಂಡ್ಯ, ಚೆನ್ನೈ ಸೂಪರ್ ಕಿಂಗ್ಸ್ನ ಮಹೇಂದ್ರ ಸಿಂಗ್ ಧೋನಿ, ಲಕ್ನೋ ಸೂಪರ್ ಜೈಂಟ್ಸ್ನ ಕೆ ಎಲ್ ರಾಹುಲ್, ಪಂಜಾಬ್ ಕಿಂಗ್ಸ್ನ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಬದಲಿ ನೇಮಕವಾದ ನಿತೀಶ್ ರಾಣ ಮತ್ತು ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕಾಣಿಸಿಕೊಂಡಿದ್ದಾರೆ.