ನವದೆಹಲಿ:ಆಸ್ಟ್ರೇಲಿಯಾ ಎದುರಿನ ಟೆಸ್ಟ್, ಏಕದಿನ ಸರಣಿಯಿಂದ ಹೊರಬಿದ್ದಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಐಪಿಎಲ್ನಲ್ಲೂ ಆಡುವುದು ಅನುಮಾನವಿದೆ. ಬೆನ್ನು ನೋವಿನಿಂದ ಚೇತರಿಸಿಕೊಳ್ಳದ ವೇಗಿ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದಲೂ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಇದು ಮುಂಬೈ ಮತ್ತು ಭಾರತ ತಂಡದ ಅಭಿಮಾನಿಗಳಿ ನಿರಾಸೆ ಮೂಡಿಸಿದೆ.
ಬೆನ್ನುನೋವಿಗೆ ತುತ್ತಾಗಿ 8 ತಿಂಗಳಿನಿಂದ ಕ್ರಿಕೆಟ್ನಿಂದ ದೂರವುಳಿದಿರುವ ಭಾರತದ ಮುಂಚೂಣಿ ವೇಗಿ ಜಸ್ಪ್ರೀತ್ ಬೂಮ್ರಾ ಐಪಿಎಲ್ನಿಂದ ಹೊರಗುಳಿಯುವುದು ದಟ್ಟವಾಗಿದೆ. ಇದರಿಂದ ಮುಂಬೈ ಇಂಡಿಯನ್ಸ್ ತಂಡ ಪರ್ಯಾಯ ಬೌಲರ್ ಹುಡುಕಾಟ ನಡೆಸಬೇಕಿದೆ.
ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಕಳೆದ ಟಿ20 ವಿಶ್ವಕಪ್ಗೂ ಮೊದಲು ಬೆನ್ನುನೋವಿಗೆ ತುತ್ತಾಗಿದ್ದರು. ಅದಾದ ಬಳಿಕ ಕ್ರಿಕೆಟ್ನಿಂದ ಸತತವಾಗಿ ಹೊರಗುಳಿದಿರುವ ವೇಗಿ ಕೆಲ ದಿನಗಳ ಹಿಂದಷ್ಟೇ ಅಭ್ಯಾಸ ನಡೆಸಲು ಶುರು ಮಾಡಿದ್ದರು. ಆದರೆ, ವೈದ್ಯರು ದೈಹಿಕ ಸಕ್ಷಮತೆ ಬಗ್ಗೆ ಯಾವುದೇ ದೃಢೀಕರಣ ನೀಡದ ಕಾರಣ ಬಿಸಿಸಿಐ ಅವರನ್ನು ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳುವ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡ ಬೂಮ್ರಾ ಬೌಲಿಂಗ್ ಅಭ್ಯಾಸ ನಡೆಸಲು ಆರಂಭಿಸಿದ್ದರು. ಇದರಿಂದ ಆಸ್ಟ್ರೇಲಿಯಾ ಎದುರಿನ ಉಳಿದ 2 ಟೆಸ್ಟ್ಗಳಿಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಮುಂಬೈ ಅಭಿಮಾನಿಗಳಿಗೆ ನಿರಾಸೆ:ವೇಗಿ ಬೂಮ್ರಾ 16ನೇ ಆವೃತ್ತಿಯ ಐಪಿಎಲ್ನಿಂದಲೂ ಹೊರಬೀಳುವ ಕಾರಣ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಲಿದೆ. ತಂಡದ ಮುಂಚೂಣಿ ವೇಗಿಯಾಗಿದ್ದ ಬೂಮ್ರಾ ಅನುಪಸ್ಥಿತಿ ತಂಡವನ್ನು ಕಾಡಲಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ ಬೂಮ್ರಾ ಬದಲಿಗೆ ಇಂಗ್ಲೆಂಡ್ನ ಜೋಫ್ರಾ ಆರ್ಚರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.
ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಆವೃತ್ತಿ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿವೆ.
ವಿಶ್ವಕಪ್ನಿಂದಲೂ ಹೊರಬಿದ್ದಿದ್ದ ಬೂಮ್ರಾ:ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನು ನೋವಿನ ಕಾರಣಕ್ಕಾಗಿ ಹೊರಬಿದ್ದಿದ್ದರು. ಅಂದಿನಿಂದಲೂ ಕ್ರಿಕೆಟ್ನಿಂದ ದೂರವುಳಿದಿದ್ದಾರೆ. ವಿಶ್ವಕಪ್ಗೂ ಮೊದಲು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಬೂಮ್ರಾ ಮೊದಲ ಪಂದ್ಯವಾಡಿದ್ದರು. ಬಳಿಕ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ಬೂಮ್ರಾ ಸತತವಾಗಿ 8 ತಿಂಗಳಿನಿಂದ ಕ್ರಿಕೆಟ್ನಿಂದ ದೂರವಿದ್ದಾರೆ.
ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಇಲ್ಲ:ವೇಗಿ ಬೂಮ್ರಾ ಸಂಪೂರ್ಣ ಫಿಟ್ ಆಗದ ಕಾರಣ ಐಪಿಎಲ್ ಅಲ್ಲದೇ, ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡುವುದು ಅನುಮಾನವಿದೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವುದು ಖಚಿತವಾಗಿದೆ. ಮುಂದೆ ನಡೆಯುವ ಡಬ್ಲ್ಯೂಟಿಸಿ ಫೈನಲ್ನಿಂದಲೂ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.
ಓದಿ:ಗುಜರಾತ್ ಜೈಂಟ್ಸ್ ತಂಡದ ಜರ್ಸಿ ಅನಾವರಣ : ನಾಯಕಿಯ ಪಟ್ಟಕ್ಕಾಗಿ ಹುಡುಕಾಟ