ಉಜ್ಜಯಿನಿ (ಮಧ್ಯಪ್ರದೇಶ):ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ-20 ಪಂದ್ಯದ ಗೆಲುವಿನ ಬಳಿಕ ಯುವ ಕ್ರಿಕೆಟಿಗರಾದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್, ಎಡಗೈ ಬ್ಯಾಟರ್ ತಿಲಕ್ ವರ್ಮಾ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರು ಸೋಮವಾರ ಉಜ್ಜಯಿನಿ ಮಹಾಕಾಳೇಶ್ವರ ದೇವರ ದರ್ಶನ ಪಡೆದಿದ್ದಾರೆ. ಮಕರ ಸಂಕ್ರಾಂತಿಯ ವಿಶೇಷ ದಿನದಂದು ಬಾಬಾ ಮಹಾಕಾಲನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದಾರೆ.
ಮಹಾಕಾಳೇಶ್ವರ ದೇವಾಲಯವು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಯುವ ಆಟಗಾರರು ದೇವಸ್ಥಾನದ ನಂದಿ ಹಾಲ್‌ನಲ್ಲಿ ಕುಳಿತು ಬಾಬಾ ಮಹಾಕಾಲನಿಗೆ ಪೂಜೆ ಸಲ್ಲಿಸಿದರು. ಮುಂಜಾನೆಯ 'ಭಸ್ಮ ಆರತಿ'ಯಲ್ಲಿ ಭಾಗವಹಿಸಿ, ಶಿವನ ಆಶೀರ್ವಾದ ಪಡೆದುಕೊಂಡರು.
ಭಸ್ಮ ಆರತಿಯ ಮಹತ್ವ: ಈ ಆರತಿಯು 10 ನಾಗಾ ಸಾಧುಗಳ ನೇತೃತ್ವದಲ್ಲಿ ನಡೆಯುತ್ತದೆ. ವೈದಿಕ ಪಠಣಗಳು, ಸ್ತೋತ್ರಗಳು, ತಾಳ, ಶಂಖ ಮತ್ತು ಡಮರುಗಳ ಶಬ್ದದ ನಡುವೆ ಭಸ್ಮದಿಂದ ಮಹಾಕಾಳೇಶ್ವರನಿಗೆ ಅಲಂಕಾರ ಮಾಡಲಾಗುತ್ತದೆ. ಭಸ್ಮ ಆರತಿಯನ್ನು ಪ್ರತಿದಿನ ಬೆಳಗ್ಗೆ (ಮಹಾಶಿವರಾತ್ರಿಯ ಎರಡನೇ ದಿನ ಹೊರತುಪಡಿಸಿ) 4:00 ರಿಂದ 6:00 ರವರೆಗೆ ಮಾಡಲಾಗುತ್ತದೆ. ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಈ ಆಚರಣೆ ಕಣ್ತುಂಬಿಕೊಳ್ಳುವುದು ಪ್ರತಿಯೊಬ್ಬ ಭಕ್ತನ ಬಯಕೆಯಾಗಿರುತ್ತದೆ. ಭಸ್ಮ ಆರತಿಯನ್ನು ನೋಡುವವರು ಎಂದಿಗೂ ಅಕಾಲಿಕ ಮರಣ ಹೊಂದುವುದಿಲ್ಲ ಎಂಬ ನಂಬಿಕೆ ಜನರದ್ದಾಗಿದೆ.