ತಿರುವನಂತಪುರಂ (ಕೇರಳ):ಸರಣಿ ಗೆಲುವಿನ ಸಂಭ್ರಮದಲ್ಲಿರುವ ಭಾರತ ಕ್ರಿಕೆಟ್ ತಂಡದ ಕೆಲವು ಸದಸ್ಯರು ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯಕ್ಕೂ ಮುನ್ನ ಶನಿವಾರ ಇಲ್ಲಿನ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕ್ರಿಕೆಟಿಗರ ಜೊತೆಗೆ ಬಿಸಿಸಿಐ ಅಧಿಕಾರಿಗಳೂ ಜೊತೆಯಲ್ಲಿದ್ದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಭಾರತೀಯ ಆಟಗಾರರಾದ ಯಜುವೇಂದ್ರ ಚಹಲ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಪದ್ಮನಾಭ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದ ಅರ್ಚಕರು, ಸಿಬ್ಬಂದಿ ಜೊತೆಗೆ ಆಟಗಾರರು ಇರುವ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಕ್ರಿಕೆಟರ್ಸ್:ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ವಿರಾಮದ ಸಂದರ್ಭದಲ್ಲಿ ಸಮುದ್ರ ತಟ, ಮನರಂಜನಾ ಕಾರ್ಯಕ್ರಮ ಇಲ್ಲವೇ ಪಾರ್ಟಿಗಳಲ್ಲಿ ಹೆಚ್ಚು ಕಾಣಸಿಗುತ್ತಾರೆ. ಬಿಳಿ ಧೋತಿ ಮತ್ತು ಅಂಗವಸ್ತ್ರವನ್ನು ಧರಿಸಿ ಭಕ್ತರಂತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಕಂಡುಬರುವುದು ವಿರಳ. ಆದರೆ ಶನಿವಾರ ಪದ್ಮನಾಭನ ಕ್ಷೇತ್ರಕ್ಕೆ ಬಂದಿದ್ದ ಕ್ರಿಕೆಟಿಗರು ಅಪ್ಪಟ ಸಾಂಪ್ರದಾಯಿಕ ಶೈಲಿಯ ದಿರಿಸು ಧರಿಸಿದ್ದನ್ನು ಕಾಣಬಹುದು. ಕ್ರಿಕೆಟಿಗ ಕೆ.ಎಲ್.ರಾಹುಲ್ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡಿ ವಿಷ್ಣುವಿನ ದರ್ಶನ ಪಡೆದಿದ್ದರು.
ಸರಣಿ ಕ್ಲೀನ್ಸ್ವೀಪ್ ಗುರಿ:ಗುವಾಹಟಿ, ಕೋಲ್ಕತ್ತಾದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ವಿಕ್ರಮ ಸಾಧಿಸಿ 2-0 ಯಲ್ಲಿ ಸರಣಿ ಜಯಿಸಿರುವ ಭಾರತ ತಂಡ ತಿರುವನಂತಪುರಂನ ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆಯುವ ಮೂರನೇ ಮತ್ತು ಅಂತಿಮ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ಸ್ವೀಪ್ ಮಾಡುವ ಗುರಿ ಹೊಂದಿದೆ. ಹೊಸ ವರ್ಷದ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ, ರನ್ ಮಷಿನ್ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಈ ಪಂದ್ಯದಲ್ಲೂ ಸಿಡಿಯುವ ಕಾತುರದಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್ ತಂಡದ ಬೆನ್ನೆಲುಬಾಗಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡ ಶುಭ್ಮನ್ ಗಿಲ್ ಅಂತಿಮ ಪಂದ್ಯದಲ್ಲೂ ಸಿಂಹಳೀಯರ ಮೇಲೆ ದಂಡೆತ್ತಲು ಸಜ್ಜಾಗಿದ್ದಾರೆ.
ಆಲ್ರೌಂಡರ್ಗಳಾದ ಉಪನಾಯಕ ಹಾರ್ದಿಕ್ ಪಾಂಡ್ಯ, ಟಿ20 ಸರಣಿಯ ಸರದಾ ಅಕ್ಸರ್ ಪಟೇಲ್ ಮತ್ತೊಮ್ಮೆ ತಮ್ಮ ಕೈಚಳಕ ತೋರಿಸಬೇಕಿದೆ. ಬೌಲಿಂಗ್ ವಿಭಾಗದಲ್ಲಿ ವೇಗದಿಂದಲೇ ಬ್ಯಾಟರ್ಗಳ ದಿಕ್ಕು ತಪ್ಪಿಸಿರುವ ಉಮ್ರಾನ್ ಮಲಿಕ್ ಕರಾಮತ್ತು ಈ ಪಂದ್ಯದಲ್ಲೂ ಸಿಗಲಿದೆ. ಮೊಹಮದ್ ಸಿರಾಜ್, ಅರ್ಷದೀಪ್ ಸಿಂಗ್, ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತೊಮ್ಮೆ ಲಂಕನ್ನರನ್ನು ಕಾಡಲು ತಂತ್ರ ಹೂಡಿದ್ದಾರೆ.
ಕೊನೆಯ ಪಂದ್ಯ ಗೆಲ್ಲುತ್ತಾ ಲಂಕಾ?:ಇನ್ನೊಂದೆಡೆ, ಶ್ರೀಲಂಕಾ ಟಿ20, ಏಕದಿನ ಸರಣಿಯನ್ನು ಕೈಚೆಲ್ಲಿದ್ದು, ಕೊನೆಯ ಪಂದ್ಯದಲ್ಲಿ ಅಬ್ಬರಿಸಿ ಪ್ರವಾಸಕ್ಕೆ ವಿದಾಯ ಹೇಳಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಪ್ರತಿರೋಧ ಒಡ್ಡಿದ್ದ ನಾಯಕ ದಸುನ್ ಶನಕಾ, ಚರಿತ ಅಸಲಂಕಾ ಮತ್ತೊಮ್ಮೆ ಬ್ಯಾಟ್ ಝಳಪಿಸಬೇಕಿದೆ. ಬೌಲಿಂಗ್ನಲ್ಲಿ ಲಹಿರು ಕುಮಾರ್, ಕಸುನ್ ರಜಿತಾ ಉತ್ತಮ ಪ್ರದರ್ಶನ ಮುಂದುವರಿಸಬೇಕಿದೆ.