ನವದೆಹಲಿ: ಭಾರತೀಯ ಕ್ರೀಡಾ ಜಗತ್ತಿನಲ್ಲಿ ಇಂದಿನ ದಿನವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ, ಏಕೆಂದರೆ ಈ ದಿನ, ಜೂನ್ 20 ರಂದು, ಭಾರತೀಯ ಕ್ರಿಕೆಟ್‌ನ 3 ಶ್ರೇಷ್ಠ ಆಟಗಾರರು ಪದಾರ್ಪಣೆ ಮಾಡಿದ ದಿನವಾಗಿದೆ. ಈ ದಿನ, ಭಾರತ ಕ್ರಿಕೆಟ್ ತಂಡದ 3 ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲಿ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಪಂದ್ಯದ ವೃತ್ತಿಜೀವನವನ್ನು ಪ್ರಾರಂಭಿಸಿದರು. ಟ್ವಿಟರ್ನಲ್ಲಿ ಆನ್ ದಿಸ್ ಡೇ ಎಂದು ಬಿಸಿಸಿಐ ಹಳೆ ನೆನಪನ್ನು ಹಂಚಿಕೊಂಡಿದೆ.
1996 ರಲ್ಲಿ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಒಟ್ಟಿಗೆ ಪ್ರಾರಂಭಿಸಿದರು ಮತ್ತು ಈ ಟೆಸ್ಟ್ ಪಂದ್ಯದಲ್ಲಿ ಇಬ್ಬರೂ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಸೌರವ್ ಗಂಗೂಲಿ ಭರ್ಜರಿ ಶತಕ ಸಿಡಿಸಿದ್ದರು. ಆದರೆ, ರಾಹುಲ್ ದ್ರಾವಿಡ್ ಶತಕ ಗಳಿಸುವ ಅವಕಾಶ ವಂಚಿತರಾದರು. ಸೌರವ್ ಗಂಗೂಲಿ ಅವರು ಅಜರುದ್ದೀನ್ ಅವರ ನಾಯಕತ್ವದಲ್ಲಿ 1996 ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡದಲ್ಲಿ ಆಡುವಾಗ ಲಾರ್ಡ್ಸ್ ಮೈದಾನದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು.
ಎಡಗೈ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿ ಮೊದಲ ಪಂದ್ಯದಲ್ಲಿ 131 ರನ್‌ಗಳ ಅದ್ಭುತ ಇನ್ನಿಂಗ್ಸ್‌ನೊಂದಿಗೆ ಪದಾರ್ಪಣೆ ಮಾಡಿದರು, ಆದರೆ ರಾಹುಲ್ ದ್ರಾವಿಡ್ ತಮ್ಮ ಮೊದಲ ಪಂದ್ಯದಲ್ಲಿ 5 ರನ್‌ಗಳಿಂದ ತಮ್ಮ ಶತಕವನ್ನು ತಪ್ಪಿಸಿಕೊಂಡರು ಮತ್ತು ಕೇವಲ 95 ರನ್ ಗಳಿಸಿ ಔಟಾದರು. ನಂತರ ಭಾರತ ತಂಡದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಗೋಡೆ ಎಂದೇ ಕರೆಯಲಾಗುತ್ತದೆ. ಟೆಸ್ಟ್ನಲ್ಲಿ ಅವರು ಕ್ರೀಸ್ಗೆ ಬಂದರೆ ಅವರ ವಿಕೆಟ್ ತೆಗೆಯಲು ಬೌಲರ್ಗಳು ಹರಸಾಹಸವೇ ಪಡೆಬೇಕಾಗಿತ್ತು. ಪ್ರಸ್ತುತ ಭಾರತ ತಂಡದ ಕೋಚ್ ಆಗಿದ್ದಾರೆ. ದ್ರಾವಿಡ್ 164 ಪಂದ್ಯಗಳಿಂದ 286 ಇನ್ನಿಂಗ್ಸ್ ಆಡಿದ್ದು, 52.31ರ ಸರಾಸರಿಯಲ್ಲಿ 5 ದ್ವಿಶತಕ 36 ಶತಕ, 63 ಅರ್ಧಶತಕ ಸಹಿತ 13,288 ರನ್ ಕಲೆಹಾಕಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 270 ಆಗಿದೆ.