ನವದೆಹಲಿ:ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಅವರ ತಂದೆ ತಿಲಕ್ ಯಾದವ್ ಬುಧವಾರ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕಳೆದ ಹಲವು ತಿಂಗಳುಗಳಿಂದ ತಿಲಕ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬುಧವಾರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಇಹಲೋಕ ತ್ಯಜಿಸಿದರು. ಉಮೇಶ್ ಯಾದವ್ ಅವರನ್ನು ಹೊರತುಪಡಿಸಿ, ತಿಲಕ್ ಯಾದವ್ ಅವರಿಗೆ ಕಮಲೇಶ್ ಮತ್ತು ರಮೇಶ್ ಎಂಬ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ನಾಗಪುರದ ಕೋಲಾರದಲ್ಲಿ ತಿಲಕ್ ಯಾದವ್ ಅಂತ್ಯಕ್ರಿಯೆ ಮಾಡಲಾಯಿತು.
ಉಮೇಶ್ ಯಾದವ್ ಅವರು ಕ್ರಿಕೆಟ್ ಆಗುವ ಬಗ್ಗೆ ತಂದೆ ತಿಲಕ್ ಯಾದವ್ ಬಹಳಷ್ಟು ಕನಸುಗಳನ್ನು ಕಂಡಿದ್ದರು. ಅವರು ತಮ್ಮ ಜೀವದಲ್ಲಿ ಉಮೇಶ್ಗಾಗಿ ಹಲವು ತ್ಯಾಗಗಳನ್ನೂ ಮಾಡಿದ್ದರು. ತಿಲಕ್ ಯಾದವ್ ಅವರ ನಿಧನದ ಬಗ್ಗೆ ಭಾರತದ ಮತ್ತೋರ್ವ ವೇಗಿ ಮೊಹಮ್ಮದ್ ಸಿರಾಜ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಉಮೇಶ್ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಕಲ್ಲಿದ್ದಲು ಗಣಿಯಲ್ಲಿ ಕೆಲಸಗಾರರಾಗಿದ್ದ ತಿಲಕ್ ಯಾದವ್:ಉಮೇಶ್ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಮೂಲಕ ಕ್ರಿಕೆಟಿಗರಾದರು. ಉಮೇಶ್ ಯಾದವ್ ಅವರ ತಂದೆ ತಿಲಕ್ ಯಾದವ್ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಜನಿಸಿದ್ದರು. ಪ್ರಸಿದ್ಧ ಕುಸ್ತಿಪಟು ಆಗಿದ್ದ ಅವರು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಲು ನಾಗಪುರಕ್ಕೆ ತೆರಳಿದ್ದರು. ತಂದೆ ತಿಲಕ್ ಯಾದವ್ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಮಗ ಉಮೇಶ್ ಯಾದವ್ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಅವರ ಕನಸನ್ನು ಈಡೇರಿಸಿದ್ದರು. ಮಧ್ಯಮ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಮಗನನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗನನ್ನಾಗಿ ಮಾಡಿದ ಶ್ರೇಯಸ್ಸು ತಿಲಕ್ ಯಾದವ್ ಅವರಿಗೆ ಸಲ್ಲುತ್ತದೆ.