ರಾಂಚಿ(ಜಾರ್ಖಂಡ್): ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಕಂ ಎಡಗೈ ಬ್ಯಾಟರ್ ಇಶಾನ್ ಕಿಶನ್ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಆರಂಭಿಸಲು ಮುಂದಾಗಿದ್ದಾರೆ. ಇಲ್ಲಿನ ಸಿಮ್ಲಿಯಾ ರಿಂಗ್ ರಸ್ತೆಯಲ್ಲಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಫಾರ್ಮ್‌ಹೌಸ್ ಸಮೀಪದಲ್ಲಿ ಇಶಾನ್ ಕಿಶನ್ ಅವರ ಶಗುನ್ ಇಶಾನ್ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಶುರುವಾಗಲಿದೆ.
ರಾಂಚಿಯ ಜೆಎಸ್‌ಸಿಎ ಮೈದಾನದಲ್ಲಿ ಜಾರ್ಖಂಡ್ ಮತ್ತು ಕೇರಳ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಶಾನ್ ಕಿಶನ್ ಜಾರ್ಖಂಡ್ ಪರ ಆಡುತ್ತಿದ್ದಾರೆ. ಇತ್ತೀಚೆಗೆ, ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅತಿ ವೇಗದ ದ್ವಿಶತಕ ಸಿಡಿಸಿ ದಾಖಲೆ ಮಾಡಿದ್ದಾರೆ. ಕೇವಲ 126 ಎಸೆತಗಳಲ್ಲಿ 200 ರನ್ ಗಳಿಸಿದ್ದ ಕ್ರಿಕೆಟಿಗ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.