ನವದೆಹಲಿ: 2023ರ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟಿಸಲಾಗಿದೆ. 15 ಸದಸ್ಯರ ತಂಡದಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಏಷ್ಯಾ ಕಪ್ ತಂಡದ ಭಾಗವಾಗಿರುವ ಹೆಚ್ಚಿನ ಆಟಗಾರರಿಗೆ ಅವಕಾಶ ಸಿಕ್ಕಿದೆ.
ರೋಹಿತ್ ಶರ್ಮಾ ಮುನ್ನಡೆಸಲಿರುವ ವಿಶ್ವಕಪ್ ತಂಡದಲ್ಲಿ ಬ್ಯಾಟರ್ ಸೂರ್ಯಕುಮಾರ್ ಯಾದವ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಆರಂಭಿಕ ಆಟಗಾರ ಶುಭಮನ್ ಗಿಲ್, ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಪೇಸ್ ಬೌಲಿಂಗ್ ಜೊತೆಗೆ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ತಂಡವನ್ನು ಸೇರಿಕೊಂಡಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆರೋಗ್ಯ ಪರೀಕ್ಷೆಯ ನಂತರ ಮತ್ತೊಮ್ಮೆ ಫಿಟ್ ಎಂದು ಸಾಬೀತು ಪಡಿಸಿರುವ ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಶ್ವಕಪ್ ತಂಡ ಸೇರುವ ನಿರೀಕ್ಷೆಯಲ್ಲಿದ್ದ ಶಿಖರ್ ಧವನ್ ಹಾಗೂ ಯುಜ್ವೇಂದ್ರ ಚಹಾಲ್ ಅವರಿಗೆ ನಿರಾಸೆಯಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕುಲದೀಪ್ ಯಾದವ್, ಎಡಗೈ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರ ಮೇಲೆ ವಿಶ್ವಾಸ ಇಟ್ಟಿದೆ.
ಶ್ರೀಲಂಕಾದ ಕ್ಯಾಂಡಿಯಲ್ಲಿ ಇಂದು ಮಧ್ಯಾಹ್ನ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ತಂಡದ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಇದು ಬಹುಶಃ ನಮ್ಮ ಅತ್ಯುತ್ತಮ 15 ಆಟಗಾರರ ತಂಡವಾಗಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದರು. ಸೆಮಿಸ್‌ಗೂ ಮುನ್ನ ನಾವು ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳನ್ನು ಆಡಲಿದ್ದು, ಸಮಯ ಸಿಗಲಿದು ಒಂದು ಅಥವಾ ಎರಡು ಪಂದ್ಯಗಳ ನಂತರ ನಾವು ಮತ್ತೆ ಪುಟಿದೇಳಬಹುದು ಎಂದು ತಿಳಿಸಿದರು.