ನಾಟಿಂಗ್ಹ್ಯಾಮ್:ಇಂಗ್ಲೆಂಡ್ ವಿರುದ್ಧ ಆರಂಭಗೊಂಡಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಪ್ರಥಮ ಪಂದ್ಯದ ಮೊದಲ ದಿನ ಭಾರತ ಮೇಲುಗೈ ಸಾಧಿಸಿದೆ. ಆಂಗ್ಲರನ್ನು 183 ರನ್ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ, ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ.
ಇನ್ನಿಂಗ್ಸ್ ಆರಂಭಿಸಿರುವ ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ ರಕ್ಷಣಾತ್ಮಕ ಬ್ಯಾಟಿಂಗ್ ಮೊರೆ ಹೋಗಿದ್ದು ಅಜೇಯರಾಗುಳಿದಿದ್ದಾರೆ. ಭಾರತವು 13 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 ಗಳಿಸಿದ್ದು, ರಾಹುಲ್ 9 (39 ಎಸೆತ) ಹಾಗೂ ರೋಹಿತ್ 9 (40 ಎಸೆತ) ರನ್ ಬಾರಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು ಭಾರತೀಯ ವೇಗಿಗಳ ದಾಳಿಗೆ ತತ್ತರಿಸಿ ಕೇವಲ 183 ರನ್ಗಳಿಗೆ ಆಲೌಟ್ ಆದರು. ಇಂಗ್ಲೆಂಡ್ಗೆ ಬುಮ್ರಾ ಮೊದಲ ಓವರ್ನಲ್ಲೇ ಆಘಾತ ನೀಡಿದರು. ಆರಂಭಿಕ ಬ್ಯಾಟ್ಸ್ಮನ್ ರೋರಿ ಬರ್ನ್ಸ್ ಅವರನ್ನು ತಮ್ಮ ಮೊದಲ ಓವರ್ನಲ್ಲಿ ಖಾತೆ ತೆರೆಯುವ ಮುನ್ನವೇ ಎಲ್ಬಿ ಬಲೆಗೆ ಬೀಳಿಸಿದರು.
ನಂತರ 2ನೇ ವಿಕೆಟ್ಗೆ 42 ರನ್ ಸೇರಿಸಿ ಆಂಗ್ಲರ ಇನ್ನಿಂಗ್ಸ್ಗೆ ಡೊಮಿನಿಕ್ ಸಿಬ್ಲೆ (18) ಮತ್ತು ಜ್ಯಾಕ್ ಕ್ರಾಲಿ(27) ಚೇತರಿಕೆ ನೀಡಿದರು. ಆದರೆ, ಈ ಹಂತದಲ್ಲಿ ದಾಳಿಗಿಳಿದ ಸಿರಾಜ್ ಕ್ರಾಲಿಯನ್ನು ಪೆವಿಯಲಿಯನ್ಗಟ್ಟಿದರೆ, ಶಮಿ, ಸಿಬ್ಲೆ ವಿಕೆಟ್ ಪಡೆದರು.
66ಕ್ಕೆ 3 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಮತ್ತು ಜಾನಿ ಬೈರ್ಸ್ಟೋವ್ (29) 4ನೇ ವಿಕೆಟ್ಗೆ 72 ರನ್ಗಳ ಜೊತೆಯಾಟ ನೀಡಿದರು. ಆದರೆ, ತಮ್ಮ ಎರಡನೇ ಸ್ಪೆಲ್ನಲ್ಲಿ ದಾಳಿಗಿಳಿದ ಶಮಿ 29 ರನ್ಗಳಿಸಿದ್ದ ಬೈರ್ರ್ಸ್ಟೋವ್ ಮತ್ತು ಕ್ರೀಸ್ಗೆ ಆಗಮಿಸಿದ ಲಾರೆನ್ಸ್ರನ್ನು ಒಂದೇ ಓವರ್ನಲ್ಲಿ ಔಟ್ ಮಾಡಿದರು.
ನಂತರ ಬಂದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಕೂಡ 18 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೇ ಶಾರ್ದುಲ್ ಠಾಕೂರ್ ಬೌಲಿಂಗ್ನಲ್ಲಿ ಪಂತ್ಗೆ ಕ್ಯಾಚ್ ನೀಡಿ ಔಟಾದರು. 108 ಎಸೆತಗಳಲ್ಲಿ 11 ಬೌಂಡರಿ ಸಹಿತ 64 ರನ್ಗಳಿಸಿ ಎಚ್ಚರಿಕೆಯಿಂದ ಆಡುತ್ತಿದ್ದ ನಾಯಕ ರೂಟ್ ಕೂಡ ಠಾಕೂರ್ ಬೌಲಿಂಗ್ ಅರಿಯುವಲ್ಲಿ ವಿಫಲರಾಗಿ ಎಲ್ಬಿ ಬಲೆಗೆ ಬಿದ್ದರು.
ಆಲ್ಲಿ ರಾಬಿನ್ಸನ್ (0), ಸ್ಟುವರ್ಟ್ ಬ್ರಾಡ್(4) ಮತ್ತು ಜೇಮ್ಸ್ ಆ್ಯಂಡರ್ಸನ್ 1 ರನ್ಗೆ ಔಟಾದರು. ಕೊನೆಯಲ್ಲಿ ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ತೋರಿದ ಸ್ಯಾಮ್ ಕರ್ರನ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 27ರನ್ಗಳಿಸಿ ಅಜೇಯರಾಗುಳಿದರು.
ಭಾರತದ ಪರ ಮೊಹಮ್ಮದ್ ಶಮಿ 23ಕ್ಕೆ 3, ಬುಮ್ರಾ 46ಕ್ಕೆ4, ಮೊಹಮ್ಮದ್ ಸಿರಾಜ್ 48ಕ್ಕೆ 1, ಶಾರ್ದುಲ್ ಠಾಕೂರ್ 41ಕ್ಕೆ 2 ವಿಕೆಟ್ ಪಡೆದರು.
ಇದನ್ನು ಓದಿ:ಇಂಗ್ಲೆಂಡ್ ಪರ ಹೆಚ್ಚು ಅಂತಾರಾಷ್ಟ್ರೀಯ ರನ್ ಬಾರಿಸಿದ ದಾಖಲೆಗೆ ಜೋ ರೂಟ್ ಭಾಜನ