ನೈನಿತಾಲ್(ಉತ್ತರಾಖಂಡ):ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ತನ್ನ ವೇಗ ಮತ್ತು ಕರಾರುವಾಕ್ ದಾಳಿಯಿಂದ ಬ್ಯಾಟರ್ಗಳ ಎದೆ ನಡುಗಿಸಿದ್ದ ವೇಗದ ಬೌಲರ್ ಮೊಹಮದ್ ಶಮಿ, ಕಾರು ಅಪಘಾತಕ್ಕೀಡಾದ ವ್ಯಕ್ತಿಯ ಪ್ರಾಣ ಕಾಪಾಡಿದ್ದಾರೆ. ಉತ್ತರಾಖಂಡದ ನೈನಿತಾಲ್ನ ಕಣಿವೆಯೊಂದರಲ್ಲಿ ಕಾರೊಂದು ಅಪಘಾತಕ್ಕೀಡಾಗಿದ್ದನ್ನು, ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಶಮಿ ಗಮನಿಸಿದ್ದು, ಕಾರು ನಿಲ್ಲಿಸಿ ಸಹಾಯಹಸ್ತ ಚಾಚಿದರು.
ಘಟನೆಯ ವಿಡಿಯೋವನ್ನು ಶಮಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಸ್ತೆ ದಾಟಿ ಕಣಿವೆಗೆ ಬಿದ್ದ ಕಾರನ್ನು ವಿಡಿಯೋದಲ್ಲಿ ಕಾಣಬಹುದು. ಶಮಿ ಕಾರಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದು ಉಪಚರಿಸುತ್ತಿರುವುದೂ ಇದೆ. 'ಆತ ತುಂಬಾ ಅದೃಷ್ಟಶಾಲಿ. ಭಗವಂತ ಮರುಜನ್ಮ ನೀಡಿದ್ದಾನೆ. ನೈನಿತಾಲ್ ಬಳಿಯ ಕಣಿವೆಯಲ್ಲಿ ಕಾರು ಅಪಘಾತಕ್ಕೀಡಾಗಿತ್ತು. ನಾವು ಆತನನ್ನು ಸುರಕ್ಷಿತವಾಗಿ ಹೊರಗೆ ಕರೆತಂದೆವು' ಎಂದು ಬರೆದುಕೊಂಡಿದ್ದಾರೆ.
ಅಪಘಾತದಿಂದ ಪಾರಾಗಿದ್ದ ಶಮಿ:2018ರಲ್ಲಿ ಡೆಹ್ರಾಡೂನ್ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಶಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಅಂದು ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಶಮಿ ಇದ್ದ ಕಾರು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಕಾರು ನುಜ್ಜುಗುಜ್ಜಾಗಿ, ಶಮಿ ತಲೆಗೆ ಗಂಭೀರ ಗಾಯವಾಗಿತ್ತು. ಅಪಘಾತ ಸಂಭವಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ತಲೆಗೆ ಹೊಲಿಗೆಗಳನ್ನೂ ಹಾಕಲಾಗಿತ್ತು.