ಬೆನೊನಿ (ದಕ್ಷಿಣ ಆಫ್ರಿಕಾ): ಚೊಚ್ಚಲ ಆವೃತ್ತಿಯ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ಮೊದಲ ಗೆಲುವು ದಾಖಲಿಸಿತು. ಆರಂಭಿಕರಾದ ಶ್ವೇತಾ ಸೆಹ್ರಾವತ್, ನಾಯಕಿ ಶಫಾಲಿ ವರ್ಮಾ ಅವರ ಅದ್ಭುತ ಬ್ಯಾಟಿಂಗ್ ಬಲದಿಂದ ಭಾರತ ಮಹಿಳೆಯರ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಮಹಿಳೆಯರು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 166 ರನ್ ಗಳಿಸಿದರು. ಈ ಗುರಿ ಬೆನ್ನತ್ತಿದ ಭಾರತೀಯ ವನಿತೆಯರು 16.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 170 ರನ್ ಗಳಿಸಿ ವಿಜಯದ ಕೇಕೆ ಹಾಕಿದರು.
ದಕ್ಷಿಣ ಆಫ್ರಿಕಾದ ಸಿಮೋನ್ ಲೊರೆನ್ಸ್ ಭಾರತದ ಬೌಲರ್ಗಳನ್ನು ಕೆಚ್ಚೆದೆಯಿಂದ ಎದುರಿಸಿ 44 ಎಸೆತಗಳಲ್ಲಿ 61 ರನ್ ಗಳಿಸಿದರು. ಉಳಿದಂತೆ, ಮ್ಯಾಡಿಸನ್ ಲ್ಯಾಂಡ್ಸ್ಮನ್ 17 ಎಸೆತಗಳಲ್ಲಿ 32 ರನ್ ಮತ್ತು ಎಲಾಂಡ್ರಿ ರೆನ್ಸ್‌ಬರ್ಗ್ 13 ಎಸೆತಗಳಲ್ಲಿ 23 ರನ್ ಪಡೆದುಕೊಂಡರು. ಭಾರತದ ಆಟಗಾರ್ತಿ ಶ್ವೇತಾ ಸೆಹ್ರಾವತ್ 57 ಎಸೆತದಲ್ಲಿ 92 ರನ್ ಗಳಿಸುವುದರ ಮೂಲಕ ಇಂಡಿಯಾ ಗೆಲುವಿಗೆ ಕಾರಣರಾದರು. ತಂಡದ ನಾಯಕಿ ಶಫಾಲಿ ವರ್ಮಾ ಜವಾಬ್ದಾರಿಯುತವಾಗಿ ಆಡಿ 16 ಎಸೆತಗಳಲ್ಲಿ 45 ರನ್ ಕಲೆ ಹಾಕಿದರು.