ಸೌತಾಂಪ್ಟನ್(ಇಂಗ್ಲೆಂಡ್): ಇಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಆಕರ್ಷಕ ಆಲ್‌ರೌಂಡ್ ಆಟದ ಫಲವಾಗಿ ಟೀಂ ಇಂಡಿಯಾ ಭರ್ಜರಿ ಗೆಲುವು ಪಡೆಯಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಬಳಗ 1-0ರ ಮುನ್ನಡೆ ಪಡೆದಿದೆ.
ಭಾರತ ಇನಿಂಗ್ಸ್: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತ್ತು. ಓಪನರ್ ರೋಹಿತ್ ಶರ್ಮಾ 24 ರನ್ ಗಳಿಸಿ ಮೊಯಿನ್ ಬೌಲಿಂಗ್ನಲ್ಲಿ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. 8 ರನ್ ಗಳಿಸಿದ್ದ ಇಶಾನ್ ಕಿಶಾನ್ ಸಹ ಮೊಯಿನ್ ಕೈಚಳಕ್ಕೆ ಕ್ರೀಸ್‌ನಿಂದ ನಿರ್ಗಮಿಸಿದರು.
ಅಮೋಘ ಲಯದಲ್ಲಿರುವ ದೀಪಕ್ ಹೂಡಾ 33 ರನ್ ಮತ್ತು ಸೂರ್ಯಕುಮಾರ್ ಯಾದವ್ 39 ರನ್ ಸಿಡಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಇದಾದ ಬಳಿಕ ಬಂದ ಸ್ಫೋಟಕ ಬ್ಯಾಟರ್ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ 51 ರನ್ ಗಳಿಸಿ ಮಿಂಚು ಹರಿಸಿದರು. ಇನ್ನುಳಿದಂತೆ ಅಕ್ಷರ್ ಪಟೇಲ್ 17, ದಿನೇಶ್ ಕಾರ್ತಿಕ್ 11, ಹರ್ಷಲ್ ಪಟೇಲ್ 3, ಭುವನೇಶ್ವರ್ ಕುಮಾರ್ 1 ಮತ್ತು ಅರ್ಷದೀಪ್ ಸಿಂಗ್ 2 ರನ್ ಸೇರಿಸಿದರು. ಒಟ್ಟಾರೆ 198 ರನ್ ಕಲೆ ಹಾಕುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಬೃಹತ್ ಗುರಿ ನೀಡಿತು. ಇಂಗ್ಲೆಂಡ್ ಪರ ಮೊಯಿನ್ ಅಲಿ, ಜೋರ್ಡಾನ್ ತಲಾ 2 ವಿಕೆಟ್ ಪಡೆದರೆ, ಟೊಪ್ಲಿ, ಮ್ಯಾಥ್ಯೂ ಫರ್ಕಿನ್ ಸನ್ ಮತ್ತು ಮಿಲ್ಸ್ ತಲಾ ಒಂದೊಂದು ವಿಕೆಟ್ ಕಿತ್ತರು.