ಬೆಂಗಳೂರು: ಕಿವೀಸ್ ವಿರುದ್ಧದ ಸೆಮೀಸ್ ಪಂದ್ಯಕ್ಕೂ ಮುನ್ನ ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ಭಾರತ ತಂಡ ನೆದರ್ಲೆಂಡ್ಸ್ ಜೊತೆಗೆ ಉತ್ತಮ ಅಭ್ಯಾಸ ಪಂದ್ಯವನ್ನಾಡಿತು. 2023ರ ವಿಶ್ವಕಪ್‌ನಲ್ಲಿ ಭಾರತ ತಂಡ ಲೀಗ್ ಹಂತದಲ್ಲಿ ಒಂದೂ ಸೋಲನ್ನು ಕಾಣದೇ ಸೆಮಿ ಫೈನಲ್ ಪ್ರವೇಶ ಪಡೆದುಕೊಂಡಿತು. ಬೆಂಗಳೂರಿನಲ್ಲಿ 160 ರನ್‌ಗಳ ಗೆಲುವಿನ ನಂತರ, ಭಾರತವು ಸತತ 9 ಪಂದ್ಯಗಳಲ್ಲಿ ಅಜೇಯರಾಗಿ ಉಳಿದ ನಂತರ ವಿಶ್ವಕಪ್ ಇತಿಹಾಸದಲ್ಲಿ ತನ್ನ ಸುದೀರ್ಘ ಗೆಲುವಿನ ಸರಣಿಯನ್ನು ದಾಖಲಿಸಿದೆ. 2003ರ ವಿಶ್ವಕಪ್‌ನಲ್ಲಿ 8 ಪಂದ್ಯಗಳ ಗೆಲುವಿನ ಸರಣಿಯನ್ನು ಮೀರಿಸಿದೆ.
ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತು. ಶ್ರೇಯಸ್ ಅಯ್ಯರ್ (128*) ಮತ್ತು ಕೆಎಲ್ ರಾಹುಲ್ (102) ಶತಕವನ್ನು ಗಳಿಸಿದರೆ, ರೋಹಿತ್ ಶರ್ಮಾ (61), ಶುಭಮನ್ ಗಿಲ್ (51) ಮತ್ತು ವಿರಾಟ್ ಕೊಹ್ಲಿ (51) ಅರ್ಧಶತಕ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಈ ಗುರಿಯನ್ನು ಬೆನ್ನತ್ತಿದ ಡಚ್ಚರು 47.5 ಬಾಲ್ಗೆ 250 ರನ್ ಗಳಿಸಿ ಆಲ್ಔಟ್ ಆದರು. ಇದರಿಂದ ರೋಹಿತ್ ಶರ್ಮಾ ಪಡೆ 160 ರನ್‌ಗಳ ಗೆಲುವು ದಾಖಲಿಸಿತು.
ಬೆಂಗಳೂರಿನ ಬ್ಯಾಟಿಂಗ್ ಪಿಚ್ನಲ್ಲಿ ಡಚ್ ಆಟಗಾರರು ಇಬ್ಬನಿಯ ಜೊತೆಗೆ ಭಾರತೀಯ ಬೌಲರ್ಗಳ ವಿರುದ್ಧ ಉತ್ತಮ ಪ್ರದರ್ಶನ ತೋರಿದರು. 5 ರನ್ಗೆ ಮೊದಲ ವಿಕೆಟ್ ಉರುಳಿದರೂ, ಎರಡನೇ ವಿಕೆಟ್ಗೆ ಮ್ಯಾಕ್ಸ್ ಓಡೌಡ್ (30) ಮತ್ತು ಕಾಲಿನ್ ಅರ್ಕಮನ್ (35) 61 ರನ್‌ಗಳ ಪಾಲುದಾರಿಕೆ ಮಾಡಿದರು. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಜೊತೆ ಸ್ಕಾಟ್ ಎಡ್ವರ್ಡ್ಸ್ (17) ಮತ್ತು ಬಾಸ್ ಡಿ ಲೀಡೆ (12) ಕ್ರಮವಾಗಿ 39 ಮತ್ತು 33 ರನ್‌ಗಳ ಪಾಲುದಾರಿಕೆ ಮಾಡಿದರು. ಸೈಬ್ರಾಂಡ್ 5 ರನ್ನಿಂದ ಅರ್ಧಶತಕದಿಂದ ವಂಚಿತರಾದರು. ಸೈಬ್ರಾಂಡ್ 80 ಬಾಲ್ ಆಡಿ 4 ಬೌಂಡರಿಯಿಂದ 45 ರನ್ ಕಲೆಹಾಕಿದರು.
ತೇಜಾ ನಿಡಮನೂರು ಕೊನೆಯಲ್ಲಿ ಹೋರಾಟವನ್ನು ತೋರಿದರು. ಕೆಳ ಕ್ರಮಾಂಕದ ಬ್ಯಾಟರ್ಗಳ ಜೊತೆಗೆ ಇನ್ನಿಂಗ್ಸ್ ಕಟ್ಟಿದ ಅವರು ಅರ್ಧಶತಕ ಗಳಿಸಿದರು. ಲೋಗನ್ ವ್ಯಾನ್ ಬೀಕ್ (16), ರೋಲೋಫ್ ವ್ಯಾನ್ ಡೆರ್ ಮೆರ್ವೆ (16) ಮತ್ತು ಆರ್ಯನ್ ದತ್ (5) ಜೊತೆಗೆ ಸೇರಿ ವಿಕೆಟ್ ಕಾಯ್ದುಕೊಂಡ ತೇಜಾ 39 ಬಾಲ್ನಲ್ಲಿ 6ಸಿಕ್ಸ್ ಮತ್ತು 1 ಬೌಂಡರಿಯಿಂದ 54 ರನ್ ಗಳಿಸಿ 10ನೇ ವಿಕೆಟ್ ಆಗಿ ಔಟ್ ಆದರು.