ಜೋಹಾನ್ಸ್‌ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ-20 ಸರಣಿ 1-1 ರಿಂದ ಸಮಬಲಗೊಂಡಿದೆ. ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋತು ಹಿನ್ನಡೆಯಲ್ಲಿದ್ದ ಭಾರತ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದ್ದು, ನಾಯಕ ಸೂರ್ಯಕುಮಾರ್ ಮತ್ತು ಕುಲದೀಪ್ ಯಾದವ್ ಭರ್ಜರಿ ಪ್ರದರ್ಶನದಿಂದ 106 ರನ್‌ಗಳ ಗೆಲುವು ದಾಖಲಿಸಿದೆ.
ಗುರುವಾರ (ನಿನ್ನೆ) ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಸೂರ್ಯಕುಮಾರ್ ಯಾದವ್ ಅವರ ಶತಕದ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 201 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಬೃಹತ್ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬರ್ತಡೇ ಬಾಯ್ ಕುಲ್ದೀಪ್ ಯಾದವ್ ಮತ್ತು ಜಡೇಜಾ ಅವರ ಬೌಲಿಂಗ್ ದಾಳಿಗೆ ಸಿಲುಕಿ 13.5 ಓವರ್‌ಗಳಲ್ಲಿ ಕೇವಲ 95 ರನ್‌ಗಳಿಗೆ ಸರ್ವಪತನಕಂಡು ಭಾರತಕ್ಕೆ ಶರಣಾಯಿತು. ಈ ಪಂದ್ಯವನ್ನು ಭಾರತ ಬೃಹತ್ ಅಂತರದಿಂದ ಗೆದ್ದುಕೊಂಡಿತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದಿತ್ತು. ಇದೀಗ ಮೂರನೇ ಪಂದ್ಯವನ್ನು ಭಾರತ ಗೆದ್ದಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿ ಸಮಬಲಗೊಂಡಿದೆ.
ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್‌ರಾಮ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ಗೆ ಆಹ್ವಾನಿಸಿದರು. ಪಂದ್ಯ ಆರಂಭದಲ್ಲಿ ಭಾರತ ಸ್ಪೋಟಕ ಪ್ರದರ್ಶನ ನೀಡಿತ್ತು. ಆರಂಭಿಕ ಜೋಡಿಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಕೇವಲ 2.1 ಓವರ್‌ನಲ್ಲಿ 29 ರನ್ಗಳನ್ನು ಚಚ್ಚಿ ದೊಡ್ಡ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿದ್ದರು. ಆದರೆ, ಮೂರನೇ ಓವರ್‌ನಲ್ಲಿ ಕೇಶವ್ ಮಹಾರಾಜ್ ಸತತ ಎರಡು ಎಸೆತಗಳಲ್ಲಿ ಶುಭಮನ್ ಗಿಲ್ ಮತ್ತು ತಿಲಕ್ ವರ್ಮಾರ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಘಾತ ನೀಡಿದರು.