ಮೆಲ್ಬೋರ್ನ್(ಆಸ್ಟ್ರೇಲಿಯಾ):ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ 71 ರನ್ಗಳಿಂದ ಗೆಲುವು ಸಾಧಿಸಿ, 8 ಅಂಕಗಳೊಂದಿಗೆ ಗ್ರೂಪ್ 2 ರ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತು. ಭಾರತದ ಕರಾರುವಾಕ್ ಬೌಲಿಂಗ್ ದಾಳಿಗೆ ಕುಸಿದ ಕ್ರಿಕೆಟ್ ಶಿಶು ಅಲ್ಪಮೊತ್ತಕ್ಕೆ ಆಲೌಟ್ ಆಗಿ ಟೂರ್ನಿಯಿಂದ ಹೊರಬಿತ್ತು.
ಸೂರ್ಯಕುಮಾರ್, ಕೆಎಲ್ ರಾಹುಲ್ ಬ್ಯಾಟಿಂಗ್ಗೆ ಬೆದರಿದ್ದ ಜಿಂಬಾಬ್ವೆ, ಬಳಿಕ ಆರ್.ಅಶ್ವಿನ್ ಸ್ಪಿನ್ ಅಸ್ತ್ರ ಮತ್ತು ಮೊಹಮದ್ ಶಮಿ, ಹಾರ್ದಿಕ್ ಪಾಂಡ್ಯಾ ವೇಗದ ದಾಳಿಗೆ ಮುದುರಿತು. ಮೊದಲು ಬ್ಯಾಟ್ ಮಾಡಿದ್ದ ಭಾರತ 186 ರನ್ಗಳ ಬೃಹತ್ ಸವಾಲು ನೀಡಿತ್ತು. ಬ್ಯಾಟರ್ಗಳ ವೈಫಲ್ಯದಿಂದ ಜಿಂಬಾಬ್ವೆ 17.2 ಓವರ್ಗಳಲ್ಲಿ 115 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಬಿಗಿ ಬೌಲಿಂಗ್ ದಾಳಿ:ಕಠಿಣ ಗುರಿ ಬೆನ್ನತ್ತಿದ್ದ ಜಿಂಬಾಬ್ವೆ ಮೇಲೆ ಭಾರತೀಯ ಬೌಲರ್ಗಳು ಆರಂಭದಿಂದಲೇ ಸವಾರಿ ಮಾಡಿದರು. ತಂಡ ರನ್ ಖಾತೆ ತೆರೆಯುವುದಕ್ಕೂ ಮೊದಲೇ ಮೊದಲ ಎಸೆತದಲ್ಲೇ ವೆಸ್ಲೈ ಮಧೆವೆರೆಗೆ ಭುವನೇಶ್ವರ್ ಕುಮಾರ್ ಪೆವಿಲಿಯನ್ ದಾರಿ ತೋರಿಸಿದರು. 2 ರನ್ ಆಗಿದ್ದಾಗ ಅರ್ಷದೀಪ್ ಸಿಂಗ್, ರೆಗಿಸ್ ಚಕಬ್ವಾ ವಿಕೆಟ್ ಕಿತ್ತರು. ಇದರಿಂದ ತಂಡ ಒತ್ತಡಕ್ಕೆ ಸಿಲುಕಿ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ರಾಝಾ, ಬರ್ಲ್ ಅಲ್ಪ ಹೋರಾಟ:ತಂಡ ಸತತ ವಿಕೆಟ್ ಕಳೆದುಕೊಂಡು ಕುಸಿದ ಭೀತಿಯಲ್ಲಿದ್ದಾಗ ಸಿಕಂದರ್ ರಾಝಾ ಅಲ್ಪ ಪ್ರತಿರೋಧ ತೋರಿ 3 ಬೌಂಡರಿ ಸಮೇತ 34 ರನ್ ಗಳಿಸಿದರು. ಬಳಿಕ ರ್ಯಾನ್ ಬರ್ಲ್ ಕೂಡ 5 ಬೌಂಡರಿ 1 ಸಿಕ್ಸರ್ಗಳಿಂದ 35 ರನ್ ಚಚ್ಚಿದರು. ಉಳಿದೆಲ್ಲಾ ಬ್ಯಾಟರ್ಗಳು ಒಂದಂಕಿ ರನ್ ಗಳಿಸದೆ ಪೆವಿಲಿಯನ್ ಸೇರಿದರು. ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯಾ, ಮೊಹಮದ್ ಶಮಿ 2 ವಿಕೆಟ್ ಪಡೆದರು.